ಶುದ್ಧಮನಸ್ಸಿನ ಸುಂದರ ಚಿತ್ರ

 In CINEMA

 

 

the_bands_visit_poster

‘ದಿ ಬ್ಯಾಂಡ್ಸ್ ವಿಸಿಟ್’ ಒಂದು ಇಸ್ರೇಲಿ ಸಿನಿಮಾ. ಫ್ರೆಂಚ್ ಮತ್ತು ಅಮೇರಿಕನ್ ಕಂಪೆನಿಗಳು ಸೇರಿ ತೆಗೆದ ಒಂದು ಸರಳ, ಸುಂದರ ಸಿನಿಮಾ. ಸಿನಿಮಾಗೆ ಒಂದು ಉದ್ದೇಶವೂ ಇದೆ. ಇಸ್ರೇಲಿಯನ್ನರು ಮತ್ತು ಅರಬ್ಬರ ನಡುವೆ ಸಾಮರಸ್ಯವನ್ನು ಬಯಸುವ ಸಿನಿಮ ಇದು. ಸೊಗಸಾದ ಹಾಸ್ಯ, ಒಳ್ಳೆಯ ಛಾಯಾಚಿತ್ರ, ಪೂರಕವಾದ ಸಂಗೀತ, ತಾಜಾ ನಟನೆ ಇವೆಲ್ಲವನ್ನು ಉದ್ದೇಶಕ್ಕೆ ಸಮರ್ಪಕವಾಗಿ ಬಳಸಿಕೊಂಡಿದ್ದಾರೆ ನಿರ್ದೇಶಕ ಎರಾನ್ ಕೊಲ್ರಿನ್.
ಕಥೆ ತುಂಬಾ ಸರಳ. ಅಲೆಕ್ಸಾಂಡ್ರಿಯ ಸೆರೆಮೊನಿಯಲ್ ಪೋಲಿಸ್ ಬ್ಯಾಂಡ್, ಅರಬ್ ಸಾಂಸ್ಕೃತಿಕ ಕೇಂದ್ರದಲ್ಲಿ ಕಾರ್ಯಕ್ರಮ ನೀಡಲು ಬಂದಿರುತ್ತಾರೆ.  ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಯಾರೂ ಇರುವುದಿಲ್ಲ. ಎಲ್ಲವನ್ನು ಸ್ವಂತವಾಗಿ ನಿಭಾಯಿಸಿಕೊಂಡು ಬಂದಿರುವ ಈ ತಂಡ, ಮುಂದೆಯೂ ಸ್ವತಂತ್ರವಾಗಿ ನಿಭಾಯಿಸಿಕೊಳ್ಳಬಹುದೆನ್ನುವ ತಂಡದ ನಾಯಕ ಝಕಾರಿಯನ ಹಟದಿಂದ ಬಸ್ಸಿನಲ್ಲಿ ತಪ್ಪು ಸ್ಥಳಕ್ಕೆ ಬರುತ್ತಾರೆ. ಅದೊಂದು ತೀರಾ ಒಂಟಿಯಾದ, ನೀರಸವಾದ ಸಾಂಸ್ಕೃತಿಕವಾಗಿ ಬರಡಾದ ಪ್ರದೇಶ. ಸಿನಿಮಾದ ಪಾತ್ರವೊಂದು ಹೇಳುವಂತೆ ಇಲ್ಲಿ ಅರಬ್ ಸಂಸ್ಕೃತಿಯೂ ಇಲ್ಲ, ಈಜಿಪ್ಟ್ ಸಂಸ್ಕೃತಿಯೂ ಇಲ್ಲ. ಸಂಸ್ಕೃತಿಯೇ ಇಲ್ಲ
ಅಲ್ಲಿ ಸಣ್ಣ ಕೆಫೆಯನ್ನು ನಡೆಸುತ್ತಿರುವ ದೀನಾ ಹಸಿದ ಈ ಬ್ಯಾಂಡ್ ಸದಸ್ಯರಿಗೆ ಆಹಾರವನ್ನು ಒದಗಿಸುವುದರ ಜೊತೆಗೆ, ಅಂದು ಉಳಿದುಕೊಳ್ಳುವುದಕ್ಕೆ ಕೂಡ ವ್ಯವಸ್ಥೆ ಮಾಡುತ್ತಾಳೆ.
ಮೊದಲಲ್ಲಿ, ನೆಲೆ ಕಳೆದುಕೊಂಡ ಈಜಿಪ್ಚಿಯನ್ ಸಂಗೀತಗಾರರಿಗೆ ಇಸ್ರೇಲರೊಂದಿಗೆ ಹೊಂದಿಕೆಯೇ ಸಾಧ್ಯವಿಲ್ಲ ಅನ್ನಿಸುತ್ತದೆ.  ಅನಿವಾರ್ಯವಾಗಿ ಅವರಿಬ್ಬರು ಪರಸ್ಪರ ಮಾತನಾಡಲು ಪ್ರಯತ್ನಿಸುತ್ತಾರೆ. ಅವರ ಇಡೀ ಸಂವಾದ ನಡೆಯುವುದು ಹರಕು ಮುರುಕು ಇಂಗ್ಲೀಷಿನಲ್ಲಿ.  ಕ್ರಮೇಣ ಅವರ ನಡುವೆ ಸಮಾನ ಅಂಶಗಳು ಕಾಣಿಸಿಕೊಳ್ಳುತ್ತಾ ಹೋಗುತ್ತದೆ.  ಅವರ ನಡುವೆ ವ್ಯತ್ಯಾಸವೇ ಇಲ್ಲವೇನೋ ಅನ್ನಿಸುತ್ತದೆ. ಒಟ್ಟಿಗೆ ಸೇರಿ ಹಾಡೋದಕ್ಕೂ ಸಾಧ್ಯವಾಗುತ್ತದೆ.  ಜಾನಪದ ಧಾಟಿಯ, ಪ್ರಖ್ಯಾತ ಹಾಡು ‘ಸಮ್ಮರ್ಟೈಮ್’ ಹಾಡುತ್ತಾರೆ.  ಇದು ಸಿನಿಮಾದ ಒಂದು ಸೊಗಸಾದ ಭಾಗ.  ತುಂಬಾ ಸಲೀಸಾಗಿ ಇಡೀ ಸನ್ನಿವೇಶವನ್ನು ಸೊಗಸಾಗಿ ಸೆರೆ ಹಿಡಿದಿದ್ದಾರೆ. ಬಹುಷಃ ನಿರ್ದೇಶಕರು ಇಸ್ರೇಲಿಯನ್ನರು ಹಾಗೂ ಅವರ ನೆರೆಯವರ ನಡುವಿನ ಹೊಂದಾಣಿಕೆಯ ಸಾಧ್ಯತೆಯನ್ನು ಸಾಂಸ್ಕೃತಿಕ ನೆಲೆಯಲ್ಲೇ ಆದರಲ್ಲೂ ಸಂಗೀತದ ಮೂಲಕವೇ ಕಾಣುತ್ತಿದ್ದಾರೆ.
ಒಂದು ಕಾಲದಲ್ಲಿ ಅವರ ನಡುವೆ ಈ ಕಂದರ ಇರಲಿಲ್ಲ. ಇಸ್ರೇಲಿಯನ್ನರು ಇಜಿಪ್ಟಿನ ಸಿನಿಮಾಗಳನ್ನು ತುಂಬಾ ಇಷ್ಟ ಪಡುತ್ತಿದ್ದರು. ದೀನಾ ಅವರ ತಾಯಿಯೊಂದಿಗೆ ಈಜಿಪ್ಟ್ ಸಿನಿಮಾ ನೋಡಿ ಅಳುತ್ತಾ ಇದ್ದದನ್ನು ನೆನಪಿಸಿಕೊಳ್ಳುತ್ತಾಳೆ.  ಟಿ ವಿಯಲ್ಲಿ ಪ್ರತಿ ಶುಕ್ರವಾರ ಸಿನಿಮಾ ಪ್ರಸಾರವಾಗುತ್ತಿದ್ದಾಗ ರಸ್ತೆಯಲ್ಲಿ ಜನರೇ ಓಡಾಡುತ್ತಿರಲಿಲ್ಲವಂತೆ. ದೀನಾ ಈ ಹಳೆಯ ದಿನಗಳನ್ನು ಜನರಲ್ ಝಕಾರಿಯಾ ಜೊತೆಯಲ್ಲಿ ನೆನಪಿಸಿಕೊಳ್ಳುತ್ತಾಳೆ. ಅವರ ನಡುವಿನ ಕಲಹದಿಂದ ಈಗ ಸಾಂಸ್ಕೃತಿಕ ಬೇರ್ಪಡಿಕೆ ಉಂಟಾಗಿದೆ.  ಎರಡೂ ದೇಶದವರೂ ತುಂಬಾ ಕಳೆದುಕೊಂಡಿದ್ದಾರೆ. ಇಲ್ಲಿಯ ಯುವಕರಿಗೆ ಮಾಡಲೂ ಏನು ಇಲ್ಲ. ಸುಮ್ಮನೆ ಕಾಲ ಕಳೆಯುತ್ತಿದ್ದಾರೆ.  ಅವರು ಉಸಿರಾಡಬೇಕಾದರೆ ಇನ್ನೊಂದು ಸಮಾಜದೊಡನೆ ಒಡನಾಡಬೇಕು.  ಇಲ್ಲದಿದ್ದರೆ ಯಾರೂ ಪೂರ್ಣ ಆಗುವುದೇ ಇಲ್ಲ. ಈ ಸಿನಿಮಾದಲ್ಲಿ ತೀರಾ ಒಂಟಿಯಾದ, ಒಳಗೆ ದುಃಖ ತುಂಬಿಕೊಂಡಿರುವ ಇಸ್ರೇಲಿ ಹೆಂಗಸು ವಯಸ್ಸಾದ ಈಜಿಪ್ಟ್ ಸಂಗೀತಗಾರನೊಂದಿಗೆ ರಾತ್ರಿ ಕಳೆಯಲು ಬಯಸುತ್ತಾಳೆ. ಆತ ಕೂಡ ಒಂಟಿಯೇ. ಹೆಂಡತಿ, ಮಗನ ಸಾವಿಗೆ ಕಾರಣನಾದೇ ಅನ್ನುವ ಅಪರಾಧಿ ಭಾವನೆಯಲ್ಲಿ ಕೊರಗುತ್ತಿರುವ ಒಂಟಿ ಜೀವ. ಎಲ್ಲೋ ಒಂದು ಕಡೆ ಈ ಇಬ್ಬರು ತಮ್ಮ ದೇಶವನ್ನೇ  ಪ್ರತಿನಿಧಿಸುತ್ತಿರುತ್ತಾರೆ.
ಇವರ ಹಾಗೆಯೇ ಉಳಿದ ಸದಸ್ಯರು ಬೇರೆ ಕಡೆಗಳಲ್ಲಿ ಅಂದು ರಾತ್ರಿ ಕಳೆಯುತ್ತಾರೆ. ಎಲ್ಲರದೂ ಇದೇ ರೀತಿಯ ಅನುಭವವೇ. ನಿಜವಾಗಿಯೂ ಆರ್ಕೆಷ್ಟ್ರ ಗುಂಪು ಬ್ಯಾಂಡ್ ಆಗುವುದು ಇಲ್ಲಿ ಬಂದ ಮೇಲೆಯೇ. ಇವರೊಂದಿಗೆ ಒಡನಾಡಿದ ಮೇಲೆಯೇ.  ಹಾಗೆಯೇ ಊರಿನ ಜನ ಕೂಡ ಜನರಾಗುವುದು ಇವರೊಂದಿಗಿನ ಸಂಪರ್ಕದಿಂದ.
ತೀರಾ ಮೆಲೋಡ್ರಾಮ ಆಗಿಬಿಡಬಹುದಾದ ಸಿನಿಮಾ ಹಾಗೇ ಆಗದೆ ಒಂದು ಸುಂದರ ಚಿತ್ರವಾಗಿ ನಿಮ್ಮನ್ನು ಕಾಡುವುದು ಅದರ ಸರಳವಾದ ಶೈಲಿಯಿಂದ. ಹಾಗೂ ಚಿತ್ರದುದ್ದಕ್ಕೂ ನಿಮಗೆ ಎದುರಾಗುವ ಶುದ್ಧಮನಸ್ಸುಗಳಿಂದ. ಇದೊಂದು ಶುದ್ಧಮನಸ್ಸಿನ ಸುಂದರ ಚಿತ್ರ.

Recent Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.