ಸಂಗೀತವೆನ್ನುವುದು ವಾಚಿಕದ ಒಂದು ಭಾಗ -ಶೈಲಜಾ

 In RAGAMALA

ಬಿ ವಿ ಕಾರಂತರು ರಂಗ ಸಂಗೀತದ ಬಗ್ಗೆ ಅಲ್ಲಿ ಇಲ್ಲಿ ಮಾತನಾಡಿದ್ದನ್ನು ಇಲ್ಲಿ ಸಂಗ್ರಹಿಸಿದ್ದೇವೆ. ನಿಮ್ಮ ಬಳಿ ಇದಕ್ಕೆ ಸಂಬಂಧಿಸಿದಂತೆ ಕಾರಂತರ ಇನ್ಯಾವುದಾದರು ಸಂದರ್ಶನ ಅಥವಾ ಲೇಖನ ಇದ್ದರೆ ದಯಮಾಡಿ ಹಂಚಿಕೊಳ್ಳಿ. ಇದರ ಸಂಕ್ಷಿಪ್ತ ಭಾಗ ಈ ತಿಂಗಳ ತಿಲ್ಲಾನ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ.

ಆಧುನಿಕ ರಂಗಭೂಮಿಯಲ್ಲಿ ಸಂಗೀತ ಮತ್ತು ಹಾಡುಗಳ ಬಳಕೆ ಹೆಚ್ಚುಕಡಿಮೆ ಮರೆಯಾಗಿ ಹೋಗಿದ್ದ ಹೊತ್ತಿನಲ್ಲಿ ಬಿ ವಿ ಕಾರಂತರು ಹಾಡು ಹಾಗೂ ಸಂಗೀತವನ್ನು ಮತ್ತೆ ರಂಗಕ್ಕೆ ತಂದರು ಆದರೆ ಸಂಪೂರ್ಣವಾಗಿ ಬೇರೆ ರೀತಿಯಲ್ಲಿ. ಭಾರತದಲ್ಲಿ ನಾಟಕದ ಬಗ್ಗೆಯೇ ಯೋಚನೆ ಮಾಡುವ ಏಕೈಕ ವ್ಯಕ್ತಿ ಅಂದರೆ ಬಹುಶಃ ಕಾರಂತರು. ಸಂಗೀತ ಅನ್ನೋದು ನಾಟಕದ ಭಾಗ ಅಂತ ಅಖಂಡವಾಗಿ ಆಲೋಚನೆ ಮಾಡಿ, ನಾಟಕದ ರೂಪಕವನ್ನು ಅವರು ಸೃಷ್ಟಿ ಮಾಡಿಕೊಂಡಿದ್ದಾರೆ. ಎನ್ನುತ್ತಾರೆ ಚಂದ್ರಶೇಖರ ಕಂಬಾರರು. – ಸಂ.

ನನಗೆ ನಾಟಕದಲ್ಲಿ ವಾಚಿಕವೇ ತುಂಬಾ ಮುಖ್ಯ. ಅದಾದ ನಂತರ ಆಂಗಿಕ. ವಾಚಿಕ ಮತ್ತು ಆಂಗಿಕದ ನಂತರ ನನಗೆ ತುಂಬಾ ಮುಖ್ಯವಾಗುವುದು ಸಂಗೀತ. ಅದನ್ನು ನಾನು ವಾಚಿಕದ ಒಂದು ಭಾಗವಾಗಿಯೇ ಪರಿಗಣಿಸುತ್ತೇನೆ. ರಂಗಕ್ಕೆ ಎಲ್ಲಾ ಸೌಂಡು, ಎಲ್ಲಾ ಸಂಭಾಷಣೆಯೂ ಸಂಗೀತವೇ. ಭಾರತದಲ್ಲಂತೂ ಕೆಲವೊಮ್ಮೆ ಮಾತನಾಡುತ್ತಿದ್ದರೆ ಅದು ಸಂಗೀತದಂತೆ ಭಾಸವಾಗುತ್ತದೆ. ಗುಬ್ಬಿ ಕಂಪನಿಯಲ್ಲಿನ ಒಬ್ಬರು ಹಿರಿಯರಿಂದ ನಾನು ಕಲಿತದ್ದೇನೆಂದರೆ, ಮಾತನಾಡಿದರೆ ಅದು ಹಾಡುತ್ತಿದ್ದೀಯೆಂದು ಭಾಸವಾಗಬೇಕು ಅಂತೆಯೇ ಹಾಡಿದಾಗ ಅದು ಮಾತಿನಂತಿರಬೇಕು. ಮಾತು ಮತ್ತು ಗಾಯನ ಬೇರೆ ಬೇರೆಯಲ್ಲ. ಭಾಷೆಯ ಸುಖ ಸಿಗುವುದೇ ಸಂಗೀತ. ಹ್ರಸ್ವ ಮತ್ತು ದೀರ್ಘದ ಪ್ರಾಮುಖ್ಯ ನಮ್ಮ ಭಾಷೆಯಲ್ಲಿಯೇ ತುಂಬಾ ಇದೆ. ಭಾರತೀಯ ಭಾಷೆಗಳು ಸ್ವರಪ್ರಧಾನವಾದುವು. ಫೋನೆಟಿಕ್. ಅವು ಸ್ವರಪ್ರಧಾನವಾದುದರಿಂದಲೇ ನಾನು ಸಂಗೀತಕ್ಕೆ ಅಷ್ಟೊಂದು ಮಹತ್ವ ನೀಡಿದ್ದೇನೆ. ಧ್ವನಿ ಎನ್ನುವುದು ನೀರಿನ ಮೇಲೆ ಬಿದ್ದ ಎಣ್ಣೆಯಂತೆ ಹರಡುತ್ತಾ ಹೋಗುತ್ತದೆ.
ನನ್ನ ಯಾವುದೇ ನಾಟಕವಾಗಲಿ ಅದರಲ್ಲಿ ಹಾಡು ಇರಲೇಬೇಕು. ಅದಕ್ಕೆ ನನ್ನನ್ನು ಎಷ್ಟೋ ಜನ ತಮಾಷೆ ಮಾಡುತ್ತಾರೆ. ಇಬ್ಸನ್ನನ ನಾಟಕ ವಾಗಲಿ, ಚೆಕಾಫ್‌ನ ನಾಟಕವಾಗಲಿ ಅಥವಾ ನ್ಯೂಸ್ ಪೇಪರ್ ಕ್ಲಿಪ್ಪಿಂಗ್ ಆಗಲಿ ಕಾರಂತರು ಒಂದು ಹಾಡು ಹಾಕಿಯೇ ಹಾಕುತ್ತಾರೆ ಅಂತ. ನನಗೆ ಹಾಡು ಎಂದರೆ ಅದು ಬರೀ ಹಾಡಲ್ಲ, ಅದು ಭಾಷೆ ಮತ್ತು ಮಾತು ಕೂಡ. ಅದು ಸಂಭಾಷಣೆಯ ಒಂದು ಭಾಗ.
ರಂಗಸಂಗೀತ ಅನ್ನೋದು ತುಂಬಾ ಸ್ವತಂತ್ರವಾಗಿರಬೇಕು. ಅದಕ್ಕೆ ಎಲ್ಲಾ ಸಂಗೀತವೂ ಬೇಕು, ಜಾನಪದ ಬೇಕು, ಶಾಸ್ತ್ರೀಯ ಬೇಕು, ವೇದದ್ದೂ ಬೇಕಾಗಬಹುದು. ಅದು ಎಲ್ಲಿಂದಲೂ ಬರಬಹುದು. ಅಲಿಬಾಬ ಚಾಲೀಸ್ ಚೋರ್ ಬಂದಾಗ ಅದಕ್ಕೆ ಮುಸಲ್ಮಾನ ಸಂಗೀತ ಬೇಕಾಗಬಹುದು, ಆಫ್ಗಾನಿಸ್ತಾನದ ಹಾಡುಗಳನ್ನೂ ಹಾಕಬಹುದು. ಆ ಟ್ಯೂನ್ ಕೂಡ ಹಾಗೆ ಹಾಕಿದ್ದೀವಿ. ಅಮ್ಮಾನ ಅಲ್ಲಾ ನಮ್ಮಾನೆ ದೇವರ, ಅಲ್ಲಿನ ಸಂಗೀತದಲ್ಲಿ ಆ. . . ಎನ್ನುವಾಗ ಒಂದು ರೀತಿಯ ಧ್ವನಿಯನ್ನು ನಡುಗಿಸುವ ಪಲುಕು ಬರುತ್ತದೆ. ಈ ಸಂಗೀತ ಒಂದು ರೀತಿಯಲ್ಲಿ ಆ ಎನ್ವಿರಾನ್‌ಮೆಂಟ್ ಕೊಡುವುದಕ್ಕೋಸ್ಕರ.
ಅದೇನೇ ಇರಲಿ ರಂಗಸಂಗೀತವೆನ್ನುವುದು ಜಾನಪದವೂ ಅಲ್ಲ ಮತ್ತು ಶಾಸ್ತ್ರೀಯ ಸಂಗೀತವೂ ಅಲ್ಲ. ಹಾಗೆಯೇ ಅದು ಕೋಡಿಫೈಡ್ ಕೂಡ ಅಲ್ಲ. ಇದು ಆನ್ವಯಿಕ, ಪ್ರಾಯೋಗಿಕ ಸಂಗೀತ. ರಂಗಸಂಗೀತದಲ್ಲಿ ಮಾತಿನದೇ ಪ್ರಾಧಾನ್ಯ ಮತ್ತು ಮಾತು ಸಂಗೀತಕ್ಕೆ ಸಂಬಂಧಿಸಿರುತ್ತದೆ. ಇದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನಾಟಕಗಳನ್ನು ನಿರ್ಮಿಸುವುದು ನನ್ನ ಕೆಲಸದ ಭಾಗ. ಎಲ್ಲಾ ಯಶಸ್ವೀ ಸಂಗೀತಗಾರರೂ ತಮ್ಮ ಸಂಗೀತವನ್ನು ತಮ್ಮ ರಂಗಭೂಮಿಯ ಅನುಭವದೊಂದಿಗೆ ಬೆಸೆಯುತ್ತಾರೆ.

ನಿಮ್ಮ ರಚನೆಗಳಲ್ಲಿ ಶಾಸ್ತ್ರೀಯ ಸಂಗೀತದ ಪಾತ್ರವೇನು?

ನಾನು ಪಂಡಿತ್ ಓಂಕಾರ್‌ನಾಥ್ ಠಾಕೂರ್ ಅವರಿಂದ ಹಲವು ವರ್ಷಗಳ ಕಾಲ ಹಿಂದುಸ್ತಾನಿ ಸಂಗೀತವನ್ನು ಕಲಿತೆ. ಆದರೂ ನಾನು ಶಾಸ್ತ್ರೀಯ ಸಂಗೀತದ ಪರ ಇಲ್ಲ. ಶಾಸ್ತ್ರೀಯ ಸಂಗೀತದ ವ್ಯಾಕರಣ, ಅಂದರೆ ಆರೋಹ ಅವರೋಹಗಳನ್ನು ರಂಗಸಂಗೀತವನ್ನು ರೂಪಿಸುವಾಗ ಬಳಸುತ್ತೇನೆ. ಆದರೆ ಅದು ಜಾನಪದ ಸಂಗೀತಕ್ಕೆ ಹೆಚ್ಚು ಹತ್ತಿರವಿರುವಂತೆ ನೋಡಿಕೊಳ್ಳುತ್ತೇನೆ. ನಮ್ಮ ನಾಟಕಕ್ಕೆ ಜನಪದದ ಹಾಡುಗಳು ಶಾಸ್ತ್ರೀಯ ಸಂಗೀತಕ್ಕಿಂತ ಹೆಚ್ಚು ಹತ್ತಿರವಾಗುತ್ತವೆ – ಭಾಷೆಯ ಕಾರಣಕ್ಕಾಗಿ, ಸಣ್ಣ ಸಣ್ಣ ಲಯದ ಕಾರಣಕ್ಕಾಗಿ, ಸಣ್ಣ ಸಣ್ಣ ವಾಕ್ಯಗಳಿಂದಾಗಿ. ಶಾಸ್ತ್ರೀಯ ಸಂಗೀತವು ರಂಗ ಸಂಗೀತಕ್ಕೆ ಬಳಸಲು ತುಂಬಾ ಸ್ಟೈಲೈಸ್ಡ್ ಮತ್ತು ರಿಜಿಡ್ ಆಯ್ತು. ರಂಗಸಂಗೀತದಲ್ಲಿ ಹಲವು ಬಗೆಯ ಮ್ಯಾನರಿಸಂಸ್ ಇವೆ. ಒಂದು ನಿರ್ದಿಷ್ಟ ಭಾವ, ಸನ್ನಿವೇಶ ಮತ್ತು ಮನಃಸ್ಥಿತಿಗೆ ಹೊಂದುವಂತೆ ಪ್ರತಿಯೊಂದು ವಾದ್ಯವನ್ನೂ ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಅಭಿಜಾತ ಕಲ್ಪನೆಗಳಾದ ನವರಸ ಮತ್ತು ಸಂಚಾರಿ ಭಾವ ರಂಗಭೂಮಿಯ ಅವಿಭಾಜ್ಯ ಅಂಗ. ಆದರೆ ಅವುಗಳನ್ನು ಬಳಸುವ ರೀತಿ ಮಾತ್ರ ಸಂಪೂರ್ಣವಾಗಿ ಬೇರೆ.

ರಂಗಸಂಗೀತಕ್ಕೆ ಅಭಿಜಾತ ಸಂಗೀತದ ಕೊಡುಗೆಯನ್ನು ನಾನು ತಳ್ಳಿಹಾಕುವುದಿಲ್ಲ. ಹಾಗಿದ್ದಾಗ್ಯೂ ರಂಗಸಂಗೀತವೆನ್ನುವುದು ತನ್ನಷ್ಟಕ್ಕೇ ತಾನು ವಿಶಿಷ್ಟವಾಗಿದೆ. Its accent is on the expression, emotion and communication. ಎರಡಕ್ಕೂ ಪರಸ್ಪರ ಸಂಬಂಧವಿದೆ. ಆದರೆ ಎರಡನ್ನೂ ಹೋಲಿಸಲಾಗುವುದಿಲ್ಲ. ಎರಡನ್ನೂ ಪ್ರತ್ಯೇಕ ಅಂಕಣಗಳೆಂದು ವಿಂಗಡಿಸುವುದೂ ಸಾಧ್ಯವಿಲ್ಲ.

ನಿಮ್ಮ ಕೆಲಸಕ್ಕೆ ಯಾವುದನ್ನು ಆಧಾರವಾಗಿ ಇಟ್ಟುಕೊಂಡಿದ್ದೀರಿ (premise)?
ಚತುರಶ್ರ ಲಯ ಇಡೀ ವಿಶ್ವದ ಮೂಲ ಲಯ ಎನ್ನುವುದು ನನ್ನ ಭಾವನೆ. ಶಿಶುಗೀತೆಗಳು, ಮಗ್ಗಿ ಇವೆಲ್ಲವೂ ಇದೇ ಲಯವನ್ನು ಆಧರಿಸಿದೆ. ಲಯ ಎನ್ನುವುದು ಭಾಷೆಯೊಡನೆ ಸಂಬಂಧ ಹೊಂದಿದೆ. ಛಂದಸ್ಸು ತಾಳವಾಗಿ ಬದಲಾಗಿ ಲಯದೊಂದಿಗೆ ಸಂಬಂಧ ಹೊಂದುತ್ತದೆ. ಈ ಮೂಲ ತತ್ತ್ವವನ್ನು ಇಟ್ಟುಕೊಂಡು ನಾನು ಕೆಲಸ ಮಾಡುತ್ತೇನೆ.

ಎನ್‌ಎಸ್‌ಡಿ ಅನುಭವ

ಅಲ್ಲಿ ಅಲಕಾಜ಼ೀ ಸಂಗೀತದ ಬಗ್ಗೆಯೂ, ಪಾಶ್ಚಾತ್ಯ ಸಂಗೀತ ಕುರಿತು, ವಿಶೇಷ ಕ್ಲಾಸು ತೆಗೆದುಕೊಳ್ಳುತ್ತಿದ್ದರು. ವಾದ್ಯಗಳ ಧ್ವನಿಯಿಂದಲೇ ವಿವಿಧ ಮೂಡ್‌ಗಳು ಹೇಗೆ ಸೃಷ್ಟಿಯಾಗುತ್ತವೆ ಅಂತ ಹೇಳೋರು. ಸಂಗೀತಕ್ಕೆ ಹೊಸ ಚಿಂತನೆಯನ್ನು ಕೊಟ್ಟವ ಜಾನ್ ಕೇಜ್. ಮಾರ್ಥಾ ಗ್ರಹಾಂ ತಂಡದ ಸಂಗೀತ ಸಂಯೋಜಕನಾಗಿದ್ದ ಕೇಜ್ ತನ್ನದೇ ಸಂಸ್ಥೆ ಕಟ್ಟಿಕೊಂಡು ಬ್ಯಾಲೆಯಲ್ಲಿ ಮಾರ್ಥಾಗಿಂತ ಹೆಚ್ಚಿನ ಪ್ರಯೋಗ ಮಾಡಿದವ. ಪ್ರಾಯೋಗಿಕ ಸಂಗೀತಕ್ಕೆ ಹೊಸ ಆಯಾಮಗಳನ್ನು ಕೊಟ್ಟಾತ. ಯುರೋಪಿಯನ್ ಸಂಗೀತದಲ್ಲಿ ಹೊಸ ಚಿಂತನೆ ಇಲ್ಲ ಎಂಬ ಟೀಕೆ ಇತ್ತು. ’ಯಾವುದನ್ನು ನಾವು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತೇವೆಯೋ ಅಲ್ಲಿ ಚಿಂತನೆ ಇದ್ದೇ ಇರುತ್ತದೆ’ ಎಂದಾತ ಜಾನ್ ಕೇಜ್. ಆತನ ತಂಡ ಎನ್‌ಎಸ್‌ಡಿಗೆ ಬಂದಾಗ ಆ ತಂಡದ ಪ್ರದರ್ಶನವನ್ನು ನಾವು ನೋಡಲೇಬೇಕೆಂದು ಒತ್ತಿ ಹೇಳಿದರು ಅಲಕಾಜೀ. ನಾವು ಬಾಲ್ಕನಿಯಲ್ಲಿ ಕುಳಿತು ನೋಡುತ್ತಿದ್ದಂತೆ ನಮ್ಮ ಬೆನ್ನ ಹಿಂದಿನ ಗೋಡೆಯ ಮೇಲೆ ತಟ್ಟೆ ಹಿಡಿದು ಎಳೆದಂಥ ಧ್ವನಿ! ಆಗ ನನ್ನ ಮನಸ್ಸಿನಲ್ಲಿ ಅರೆ, ಧ್ವನಿಯನ್ನು ಎಲ್ಲಿಂದಲೂ ಯಾವುದರಿಂದಲೂ ಸೃಷ್ಟಿಸಬಹುದೇ! ಅಂತ. ಇಂತು ನನಗೆ ಬ್ಯಾಲೆ ಸಂಗೀತದ ಅರಿವು ನೀಡಿದ ವ್ಯಕ್ತಿ ಜಾನ್ ಕೇಜ್. ಒಂದು ರೀತಿಯಲ್ಲಿ ನನ್ನ ಸಂಗೀತ ಗುರುವೂ. ಆವತ್ತಂತೂ ನಾವು ಅಂತಹ ಎಷ್ಟು ತರಹದ ಧ್ವನಿಗಳನ್ನು ಕೇಳಿದೆವು. ಇದು ನಾನು ಗರ್ವರಹಿತನಾಗಿ ಪಡೆದ ನಿಜವಾದ ಅನುಭವ. ಇಲ್ಲಿಯೂ ನಾನು ನೆನೆಯಬೇಕಾದ್ದು ಅಲ್ಕಾಜ಼ೀ ಅವರನ್ನೇ. ಥಿಯೇಟರ್‌ನಲ್ಲಿ ಧ್ವನಿಗೆ ಎಷ್ಟು ಮಹತ್ವವಿದೆ ಎಂದು ನನಗೆ ತಿಳಿದಿದ್ದು ಆಷಾಡ್ ಕಾ ಏಕ್ ದಿನ್ ನೋಡಿದಾಗ. ಕಿಂಗ್‌ಲಿಯರ್‌ನಲ್ಲಿ ಮತ್ತೆ ಸಂಗೀತ ಮತ್ತು ಧ್ವನಿಗಳು ನನ್ನನ್ನು ಆಕರ್ಷಿಸಿದವು. ಲಿಯರ್ ತನ್ನ ಗೆಳೆಯರೊಂದಿಗೆ ಪಾನೀಯ ಸೇವಿಸುವಾಗಿನ ಸಂತೋಷದಲ್ಲಿ ಕುಡಿಯುತ್ತಿದ್ದ ಮಗ್ಗನ್ನೇ ಬಾರಿಸುತ್ತಾ ಹೋದಂತೆ ಅದೇ ಸಂಗೀತವಾಗಿಬಿಡುವ ಮ್ಯಾಜಿಕ್.

ನೀವು ಮೂಲತಃ ರಂಗನಿರ್ದೇಶಕರು, ಹಾಗಿದ್ದೂ ನೀವು ರಂಗಸಂಗೀತಕ್ಕೆ ಬಂದದ್ದು ಹೇಗೆ?

೧೯೬೩ರಲ್ಲಿ ರಾಷ್ಟ್ರೀಯ ರಂಗಶಾಲೆಯಿಂದ ಮರಳಿದ ಮೇಲೆ ನಾನು ಸರ್ದಾರ್ ವಲ್ಲಭಾಯಿ ಪಟೇಲ್ ವಿದ್ಯಾಲಯದಲ್ಲಿ ೭ನೇ ತರಗತಿಯ ೩೮ ಮಕ್ಕಳಿಗೆ ಒಂದು ನಾಟಕವನ್ನು ಮಾಡಿಸಬೇಕಾಯ್ತು. ಅವರನ್ನು ಒಂದು ಗಾನಮೇಳವಾಗಿ ರೂಪಿಸಬೇಕಾದಾಗ ನನಗೆ ರಂಗಸಂಗೀತದ ಅಗಾಧ ಶಕ್ತಿ ಮತ್ತು ಸಾಧ್ಯತೆಗಳ ಅರಿವಾಯಿತು. ರಂಗಸಂಗೀತ ಎಲ್ಲಾ ಕಡೆಯೂ ಇತ್ತು – ಹುಡುಗರು ಬೆಂಚು, ಟೇಬಲ್, ಛೇರುಗಳನ್ನು ಕುಟ್ಟುವುದರಲ್ಲಿ, ಕಿಟಕಿ ಬಾಗಿಲುಗಳನ್ನು ಬಡಿಯುವುದರಲ್ಲಿ ಹೀಗೆ. ನಾನು ಅವೆಲ್ಲಾ ಸದ್ದು, ಸಪ್ಪಳಗಳನ್ನೂ ಬಳಸಿಕೊಂಡೆ. ಅವುಗಳನ್ನು ಒಂದು ಸೂಕ್ತವಾದ ಲಯಕ್ಕೆ ಹೊಂದಿಸಿ ಒಂದು ಮೇಳವನ್ನು ರೂಪಿಸಿದೆ ಅದನ್ನು ನಾನು ಮತ್ತು ಮಕ್ಕಳು ಇಬ್ಬರೂ ತುಂಬಾ ಖುಷಿಪಟ್ಟೆವು. ಮುಖ್ಯ ಅಲ್ಲಿ ಬೇಕಾದ್ದು ಲಯ ಪರಿಜ್ಞಾನ, ಮೆಲೊಡಿ ಪರಿಜ್ಞಾನ, ಹೊರತು ಕೇವಲ ಸಂಗೀತ ಜ್ಞಾನ ಅಲ್ಲ. ಶಬ್ದವನ್ನು ಗುರುತಿಸುವ ಶಕ್ತಿ, ನಂತರ ಅದನ್ನು ಎಲ್ಲಿ ಹೇಗೆ ಹೊಂದಿಸಬೇಕು ಎಂಬ ಪರಿಜ್ಞಾನ, ನಂತರ ಹದದ ಕಲ್ಪನೆ. ಹಾಡಿನ ಎಷ್ಟು ಬೇಕೋ ಅಷ್ಟೇ ಭಾಗದ ಆಯ್ಕೆ, ಬಳಕೆ, ಸ್ವಲ್ಪ ಬಂದರೆ ಸಾಕು. ಬೆಳಕು ಕಾಣುತ್ತೆ, ಹೆಚ್ಚು ಹೊಳೆಯುತ್ತೆ. ಹೀಗೆ ಈ ಶಾಲೆಯಲ್ಲಿ ಅದುವರಗೆ ನನಗೆ ಗೊತ್ತಿದ್ದ ಸಂಗೀತ, ಸಂಸ್ಕಾರ, ಎಲ್ಲವೂ ಬಳಕೆಯಾದವು. ನನ್ನದೇ ಒಂದು ರಂಗಸಂಗೀತ ಸಿದ್ಧಾಂತ ರೂಪುಗೊಂಡಿತು.

ನಿಮ್ಮ ರಂಗರಚನೆಗಳನ್ನು ತುಂಬಾ ಪ್ರಭಾವಿಸಿರುವ ಪ್ರಭಾವಗಳ್ಯಾವುವು?
ಹಲವು ಇವೆ. ನನ್ನ ತಾಯ್ನೆಲವಾದ ದಕ್ಷಿಣ ಕನ್ನಡದ ಸಂಗೀತದ ಧ್ವನಿಗಳು ಮತ್ತು ಸಂಸ್ಕಾರಗಳು ಬಹು ಮುಖ್ಯ ಪ್ರಭಾವವನ್ನು ಬೀರಿವೆ. ನಾನು ಬೆಳೆದ ಗ್ರಾಮೀಣ ಪ್ರದೇಶ, ಯಕ್ಷಗಾನ ಮತ್ತು ಹರಿಕಥೆಗಳ ಜೊತೆಗಿನ ನನ್ನ ಒಡನಾಟ ನನ್ನ ಇಂದಿನ ಕೆಲಸವನ್ನು ತುಂಬಾ ಪ್ರಭಾವಿಸಿವೆ. ನನಗೆ ಧ್ವನಿಗಳಿಗೆ, ಸ್ವರಗಳಿಗೆ ಸಂಸ್ಕಾರ ಸಿಕ್ಕಿದ್ದೇ ಈ ದೇವಾಲಯಗಳ ಪೂಜಾಕೋಣೆಯಲ್ಲಿ. ಪೂಜಾರಿಗಳು ನುಡಿಸ್ತಾ ಇದ್ದ ಗಂಟೆಗಳ ಧ್ವನಿ. ಅದರ ಹೊರಭಾಗದಲ್ಲಿ ಮನೆಯವ ರೆಲ್ಲಾ ತುಂಬಿಕೊಂಡು ನುಡಿಸ್ತಾ ಇದ್ದ ತರತರದ ಜಾಗಟೆಗಳ ಸದ್ದು. ತರತರದ ತಾಳಗಳು, ನಂತರ ಶಂಖ ಊದೋದು. ಅದರಲ್ಲಿ ಕೆಲವು ನೇರವಾದ ಶಂಖ ಮತ್ತು ಕೆಲವು ಗಮಕ ಕೊಟ್ಟಂತಹ ಶಂಖ. ಈ ದೇವಾಲಯದಲ್ಲಿ ಸಾಮೂಹಿಕ ಊಟದ ಸಮಾರಾಧನೆ ಇರುತ್ತಿತ್ತು. ಇಲ್ಲಿ ಊಟ ಹೆಚ್ಚುಕಡಿಮೆ ಮುಗಿದು, ಪಾಯಸ ಬರುವ ಹೊತ್ತಿಗೆ ಚೂರ್ಣಿಕೆ ಹಾಡುವ ಪದ್ಧತಿ ಇತ್ತು. ಚೂರ್ಣಿಕೆಯ ವಿಭಿನ್ನ ಧ್ವನಿವಿನ್ಯಾಸಗಳು, ಅದು ಶ್ಲೋಕ ಇರಬಹುದು, ಯಾವುದೋ ಹಾಡಿನ ಒಂದು ಭಾಗ ಇರಬಹುದು. ಭಾಮಿನಿ ಷಟ್ಪದಿ ಇರಬಹುದು, ಅಥವಾ ಗದುಗಿನ ಭಾರತದ ಯಾವುದೋ ಒಂದು ಭಾಗ ಇರಬಹುದು. ಇವೆಲ್ಲದರ ಜೊತೆ ನಾನು ಬೆಳೆದೆ. ಅದು ಅಜ್ಜಿಯ ಊರು ಪತ್ತುಮುಡಿ ಇರಬಹುದು ಅಥವಾ ಅಪ್ಪನ ಊರು ಬಾಬುಕೋಡಿ ಇರಬಹುದು.

ಅಲೆಮಾರಿ ಗಾಯಕರ ಪ್ರಭಾವವೂ ನನ್ನ ಮೇಲಾಗಿದೆ. ಭಾರತದ ನ್ಯಾರೇಟಿವ್ ಹಾಡುಗಳು ತುಂಬಾ ಶ್ರೀಮಂತವಾಗಿವೆ. ಭಾರತದ ಪ್ರತಿ ಪ್ರಾಂತ್ಯ, ಪ್ರತಿ ಧರ್ಮ ಮತ್ತು ಪಂಗಡದ ಹಾಡುಗಳಲ್ಲಿಯೂ ಹಲವು ವಿಧವಾದ ಲಯಗಳು ಮತ್ತು ಧ್ವನಿಗಳಿವೆ. ಸಾಕಷ್ಟು ಹಿಂದೆ ನಾನು ಭೂಪಾಲಿನಲ್ಲಿ ಕೇಳಿದ ಜಾನಪದ ಗೀತೆಯೊಂದು ನನಗೆ ಹಲವು ಬಗೆಯ ಸೌಂಡ್‌ಗಳನ್ನೂ ಮತ್ತು ಎಲ್ಲಾ ಹನ್ನೆರಡು ಸ್ವರಗಳನ್ನೂ ಬಳಸುವುದಕ್ಕೆ ಅವಕಾಶ ಮಾಡಿಕೊಟ್ಟಿತು. ಪ್ರತಿ ಪ್ರಾಂತ್ಯಕ್ಕೂ ತನ್ನದೇ ಆದ ಒಂದು ಸಹಜ ಲಯವಿದೆ ಎನ್ನುವುದು ನನ್ನ ಅರಿವಿಗೆ ಬಂದಿತು. ಪರ್ವತ ಪ್ರದೇಶಗಳಾದ ಅಸ್ಸಾಂ, ಮುಸ್ಸೋರಿ, ಮುಂತಾದ ಕಡೆಗಳ ಹಾಡುಗಳ ಲಯವೇ ಅಲ್ಲಿನ ಪ್ರಾದೇಶಿಕ ಗುಣಗಳನ್ನು ಸಾರಿಬಿಡುತ್ತವೆ. ಕರ್ನಾಟಕದಲ್ಲಿ ಐದು, ಬಂಗಾಳದಲ್ಲಿ ಮೂರು, ಹಿಂದಿಯಲ್ಲಿ ಮತ್ತು ಪಂಜಾಬಿನಲ್ಲಿ ನಾಲ್ಕು ಹೀಗೆ.

ಗುಬ್ಬಿ ಕಂಪನಿ ನಾಟಕದ ಬಹು ದೊಡ್ಡ ರೆಪರ್ಟರಿ ಅಲ್ಲಿ ನಾನು ನಾಟಕಕ್ಕೆ ಸಂಬಂಧಿಸಿದ ಪ್ರತಿಯೊಂದನ್ನೂ ಕಲಿತೆ. ವಾರದಲ್ಲಿ ನಾಲ್ಕು ದಿನ ನಾಟಕ ಇದ್ದರೆ ಇನ್ನು ಮೂರುದಿನ ಹಾಡು ಮತ್ತು ಹಾಡಿನ ಬೈಠಕ್ ಇರುತ್ತಿತ್ತು. ಅಲ್ಲಿ ಎಲ್ಲರೂ ಹಾಡುತ್ತಿದ್ದರು. ಅಲ್ಲಿ ವಯೋಲಿನ್ ನುಡಿಸುವವರೇ ಹಾರ್ಮೋನಿಯಮ್ಮನ್ನೂ ನುಡಿಸುತ್ತಿದ್ದರು. ಅಲ್ಲಿ ನನಗೆ ಲೆಗ್ ಹಾರ್ಮೋನಿಯಂ ಕಲಿಸಿದರು. ಮ್ಯೂಸಿಕ್‌ನಲ್ಲಿರುವ ನನ್ನ ಸೆಕ್ಯುಲರ್ ಅಪ್ರೋಚ್ ಬಂದದ್ದೇ ಗುಬ್ಬಿ ಕಂಪೆನಿಯಿಂದ. ಅಲ್ಲಿ ಯಾವ ಧರ್ಮದ ಸಂಗೀತ ಎಂಬುದೇ ಇರಲಿಲ್ಲ ಕವ್ವಾಲಿ, ಗಝಲ್, ಭಜನೆ, ಕರ್ನಾಟಕೀ, ಹಿಂದುಸ್ತಾನೀ, ಪಾಶ್ಚಿಮಾತ್ಯ, ಎಲ್ಲಾ ಟ್ಯೂನ್‌ಗಳಿಗೂ ಸ್ವಾಗತವಿತ್ತು.

ವಿವಿಧ ಗಂಟೆಗಳಿದ್ದವು. ವಿವಿಧ ಉದ್ದಗಲ ಗಂಟೆಗಳನ್ನು ಬಾರಿಸಿದಾಗ ವಿವಿಧ ಧ್ವನಿಗಳು ಹೊಮ್ಮುತ್ತಿದ್ದವು. ಸಂಗೀತದ ಬಗ್ಗೆ ಹೊಸ ದೃಷ್ಟಿಯೇ ನನಗೆ ಸಿಕ್ಕಿಬಿಟ್ಟಿತು. ಅಲ್ಲಿ ವಾದ್ಯಮೇಳದಲ್ಲಿ ಆರ್ಗನ್, ಪಿಯಾನೋ, ಕೊಳಲು, ಡಬ್ಬಲ್ ಹಾರ್ಮೋನಿಯಂ, ಕ್ಲಾರಿಯೋನೆಟ್, ಮತ್ತು ಬೆಲ್ ರೀತಿಯ ಒಂದು ವಾದ್ಯವೂ ಇತ್ತು.
ನಾಟಕ ಸಂಗೀತದಲ್ಲಿ ಭಾರೀ ವಿದ್ವಾಂಸತನ ಏನೂ ಬೇಕಿಲ್ಲವಷ್ಟೆ? ಬೇಕಾಗೋದು ಚಾಕಚಕ್ಯತೆ, ಐಡಿಯಾ. ಯಾವ ವಾದ್ಯವನ್ನೂ ವಾದ್ಯದಂತೆ ಬಾರಿಸಿದರೆ ಅದೇನು ದೊಡ್ಡದಲ್ಲ. ಅದರಲ್ಲಿಯೇ ಉಲ್ಟಾಪಲ್ಟಾ ಧ್ವನಿ ಹೊರಡಿಸಿದರೇನೇ ರಂಗಸಂಗೀತಕ್ಕೆ ಒಪ್ಪೋದು. ಅದು ಸೃಜನಶೀಲವಾಗಿರಬೇಕು ಅಷ್ಟೆ. ಇಂತಹ ಅನೇಕ ಉದಾಹರಣೆಗಳು ಗುಬ್ಬಿ ಕಂಪನಿಯಲ್ಲಿ ನನಗೆ ಸಿಕ್ಕಿದೆ. ಅಲ್ಲಿ ನನಗೆ ಸಂಗೀತದ ಬೇರೊಂದು ಪಾಠವೇ ದೊರಕಿತು.

ಆಗೆಲ್ಲಾ ಸಾಮಾನ್ಯವಾಗಿ ರಾಗ ಹುಡುಕಿಕೊಂಡು, ಟ್ಯೂನ್ ಮಾಡಿಕೊಂಡು ನಂತರ ಹಾಡು ಬರೆದು ಕೊಡಿ ಅನ್ನೋರು. ನೀವು ಹಾಡು ಬರೆದುಕೊಟ್ಟರೆ ನಾನು ಟ್ಯೂನ್ ಹಾಕ್ತೀನಿ ಅಂದವರಲ್ಲಿ ಕಾಳಿಂಗರಾಯರೇ ಮೊದಲಿಗರು ಅಂತ ಹೇಳುತ್ತಿದ್ದರು ಪುಟ್ಟಸ್ವಾಮಯ್ಯನವರು. ಆಗ ಅದೇ ದೊಡ್ಡ ಆಶ್ಚರ್ಯವಾಗಿತ್ತಂತೆ. ಕಂಪನಿ ಪರಂಪರೆಗೆ ಇದು ತುಂಬಾ ಹೊಸತು.

ನಮ್ಮ ನಮ್ಮ ಮಾಧ್ಯಮದ ಸಾಧ್ಯತೆಗಳು ಎಷ್ಟಿವೆ ಅದನ್ನು ಹುಡುಕುತ್ತಾ ಹೋಗಬೇಕು. ಹಾಗೆ ಮ್ಯೂಸಿಕ್‌ನಲ್ಲಿ ಮುಂದೆ ಏನು, ಎಷ್ಟು ಹುಡುಕಬೇಕು ಅಂತ ಗೊತ್ತಿಲ್ಲ. ಆದರೆ ರಂಗಸಂಗೀತದ ಒಂದು ದೃಷ್ಟಿ, ಅದರ ಮುಖ, ಮಾರ್ಗ ಈಗ ಬದಲಾಗಿದೆ. ಸತ್ತವರ ನೆರಳಲ್ಲಿ ಒಂದು ರೀತಿಯಲ್ಲಿ ಎಲ್ಲಾ ಇಂಟರ್‌ಪ್ರಿಟೇಟಿವ್. ನಾನು ಈ ಲೋಕದಲ್ಲಿ ಇರಬೇಕೇ ಅಥವಾ ಹೊರಲೋಕಕ್ಕೆ ಹೋಗಬೇಕೇ? ಅಂತ ಸನ್ಯಾಸಿಯನ್ನು ಕೇಳಿದ ಕೂಡಲೆ ಇಬ್ಬರ ಹೆಂಡ್ತೀರ ಸುಖವನಿಂದು ಕಂಡೆ, ಅಬ್ಬಬ್ಬಾ ಎಂದಿಗೂ ಸಾಕು ಸಾಕಯ್ಯ. ಪುರಂದರದಾಸರೂ ಅದ್ಭುತ. ಅವರು ಅಬ್ಬಬ್ಬಾ ಎಂಬ ಉದ್ಗಾರಗಳನ್ನೆಲ್ಲಾ ಬಳಸ್ತಾರೆ. ಅವಳ ಮಗ್ಗುಲಲಿರಲು ಇವಳ ಮಗ್ಗುಲ ಕಾಟ, ಇವಳ ಮಗ್ಗುಲಲಿರಲು ಅವಳ ಕಾಟ. ಇವಳಿಂದ ಸುಖವಿಲ್ಲ, ಅವಳಿಂದ ಫಲವಿಲ್ಲ, ಇಬ್ಬರ ಸಂಗ ಅಭಿಮಾನ ಭಂಗ. ಇದು ನಿಜವಾಗಿ ಇಂಟರ್‌ಪ್ರಿಟೇಟಿವ್. ಹೊಲೆಯ ಬಂದನೆಂದು ಒಳಗೆ ದೇವರ ಮಾಡಿ ಗಣಗಣ ಗಂಟೆಯ ಬಾರಿಸುವ ಅನ್ನೋದನ್ನು ಬೇರೆ ತರಹ ಹಾಡಬಹುದಿತ್ತು. ಆದರೆ ನನಗೆ ಅನ್ಸಿದ್ದು ಆಗ ಮನಸ್ಸಿನಲ್ಲಿ ಇವರನ್ನು ಕಳಿಸಿದರೇ ಉತ್ತಮ ಎಂದು ನಿರ್ಣಯ ಮಾಡಿದ ಕೃಷ್ಣಾಚಾರ್ಯರಿಗೆ ಆ ಹೊಲೆಯ ಎಲ್ಲಿರ‍್ತಾನೆ? ತನುವಿನ ಕೋಪವು ಹೊಲೆಯಲ್ಲವೆ? ಪರಸತಿ ಪರಧನ ಹೊಲೆಯಲ್ಲವೇ? ಹೊರಗಿದ್ದ ಹೊಲೆಯನ ಒಳಗೆ ಬಚ್ಚಿಟ್ಟರೆ, ಇದಕೇನು ಮದ್ದೋ ಪುರಂದರ ವಿಠಲ? ಎನ್ನುವ ಹಾಡು ಕೂಡ ಇಂಟರ್‌ಪ್ರೆಟೇಟಿವ್. ಅದು ಡೆಕೋರೇಟಿವ್ ಅಲ್ಲ.

ಹಯವದನದಲ್ಲಿ ನದಿ ಬಗ್ಗೆ ಒಂದು ಹಾಡಿದೆ. ನೀರಿನ ಮೇಲೆ ಚಿತ್ರ ಕೆತ್ತಲಿಕ್ಕಾಗೋದಿಲ್ಲ, ನೀರಿನ ಮೇಲೆ ಗಾಯ ಮಾಡೋದಕ್ಕಾಗೋದಿಲ್ಲ, ಅದಕ್ಕೇ ನದಿಗೆ ನೆನಪಿನ ಹಂಗಿಲ್ಲ. ಇದನ್ನು ಹಾಡಿದ ಕೂಡಲೆ, ನದಿಯ ಚಲನೆ ಹೇಗೆ? ಅದು ಒಂದು ರೆಗುಲರ್ ಮೂವ್‌ಮೆಂಟ್‌ನಲ್ಲಿ ಹೋಗೋದಿಲ್ಲ. ಹಾಗಾಗಿ ಆ ಸಂಗೀತವೂ ಹಾಗೆಯೇ. ನದಿಗೆ ಬರೀ ಜಲಪಾತದ್ದೇ ಸೆಳವು. ಕಿಲ್‌ಕಿಲ್ ಅಂತ ನಕ್ಕು. ಹುಲ್ಲಿಗೆ ಕಚಗುಳಿ ಇಟ್ಟು. ಸೆಡವ ಮುರಿದು, ಮಡುವಿನ ಹೊಕ್ಕಳಲ್ಲಿ ತಿರುವಿನ ತಿರವಿ, ತರಗೆಲ ಬುಗರಿಯಾಡಿಸಿ, ಬೆಳ್ಳಿಯ ಬಲೆಯೊಳು ನೀರಹಾವು ನೇಯ್ದು, ಇದೂ ಊ ಊ ಊ ಊ, ಬಿದಿರು ಎಲೆಗಳ ಪಾಚಿ ಚಾಚಿದ ರತ್ನಗಂಬಳಿಯ ಮೇಲೆ, ಕಪ್ಪೆಹಾರಿಸಿ, ಕುಣಿದು ಕುಪ್ಪಳಿಸಿ, ಆ – ಆ – ಆ – ಆ – ಡಿ. ಹಾ . . . . .ರಿ, ಹಾ . . . . ಡಿ. ಹಾರಿ ಭೋರಿಟ್ಟು ಮೆರೀತಾಳೆ ನದಿ, ಇಲ್ಲಿ ರೆಗ್ಯುಲರ್ ರಿದಂ ಇಲ್ಲ. ಆದರೆ ನದಿಯ ಪ್ರವಾಹವನ್ನು ತೋರಿಸೋಕ್ಕೋಸ್ಕರ, ಅದರ ಗೊಂದಲವನ್ನು ತೋರಿಸೋಕ್ಕೋಸ್ಕರ, ಟ್ಯೂನ್ ಬೇರೇನೇ ಆಗ್ಬಿಡತ್ತೆ. ಇದ್ದಕ್ಕಿದ್ದ ಹಾಗೆ ಎಲ್ಲೋ ಇದ್ದ ದೇವದತ್ತ, ಎಷ್ಟು ಸ್ವಪ್ನಗಳಿದ್ವು ಇಂದ್ರನ ಜೊತೆಗೆ ಸಮರಸ ಕುಡಿದು ಸುಖಪಟ್ಟ ಹಾಗೆ. ಅಲ್ಲಿ ಬಳಸಿರುವ ಹಾಡು ಕೂಡ ಹಾಗೇ ಇದೆ. ಆ ಹಾಡು ಕೊನೆಗೊಳ್ಳುವುದು ಒಂದು ಬಿರುಕು ಬಿಟ್ಟಿತ್ತು, ಥೇಟ್ ಇಂದ್ರನ ನಗೆ ಎಂದು.

ರಂಗಭೂಮಿಯ ಮೇಲೆ ನಾಟಕಕ್ಕೋಸ್ಕರ ಸಂಗೀತ. ಅದಕ್ಕೊಂದು ಸಂಪ್ರದಾಯ ಅಥವಾ ಶಾಸ್ತ್ರೀಯ ಪರಂಪರೆ ಇಲ್ಲ. ಸಂಗೀತ ಅಂದ ಕೂಡಲೆ ಅದಕ್ಕೊಂದು ಶಾಸ್ತ್ರೀಯ ಪರಂಪರೆ, ತ್ಯಾಗರಾಜರು, ಭಾಗವತರು ಎಲ್ಲಾ ಬರ‍್ತಾರೆ. ರಂಗಸಂಗೀತ ಪ್ರತಿಸಲ ನಾಟಕವನ್ನು ಆಡಿದಾಗಲೂ ಬೇರೆ ಬೇರೆ ಆಗಬಹುದು. ಬದಲಾಗಬಹುದು. ಯಾವುದೇ ಸಂಗೀತ ಕ್ಲಾಸಿಕಲ್ ಅಂತಾಗಲೀ, ಜಾನಪದ ಅಂತಾಗಲೀ ಪ್ರಮುಖವಾಗಲಾರದು. ನಾಟಕದಲ್ಲಿ ಅದಕ್ಕೊಂದು ಹೊಸ ರೂಪ ಬರಬೇಕು.

ಗುಬ್ಬಿ ಕಂಪನಿಯಾಗಲಿ, ಇತರ ಕಂಪನಿಗಳಾಗಲಿ, ಸಿನೆಮಾದಲ್ಲಾಗಲೀ ರಾಗ ಹಾಕುತ್ತಿದ್ದರು, ಟ್ಯೂನ್ ಬದಲಾವಣೆಯನ್ನೂ ಮಾಡುತ್ತಿದ್ದರು ನಿಜ. ಆದರೆ ಅದರ ಹಿಂದೆ ಆಳ ವಿವೇಚನೆ ಇರಲಿಲ್ಲ. ವ್ಯಾಖ್ಯೆ ಇರಲಿಲ್ಲ. ನಾಟಕದ ಪೂರ್ಣ ವಿನ್ಯಾಸದ ಕಲ್ಪನೆಯೂ ಇರಲಿಲ್ಲ. ರಂಗಸಂಗೀತ ಮಾಡುವಾಗ ಚಿಂತಿಸಬೇಕಾಗುತ್ತದೆ. ಅದು ಸುಗಮವಿರಬಹುದು. ಆದರೆ ಸುಲಭವಲ್ಲ. ನಾಟಕದಲ್ಲಿ ಬೆಳವಣಿಗೆ ಸಿಗದೇ ಹೋದರೆ, ಸಂಗೀತ ಕೊಡೋಕ್ಕೆ ಆಗೋದಿಲ್ಲ. ಮೊದಲು ಸಂಗೀತ ಮಾಡಿಕೊಂಡು ಹಾಡೋದಲ್ಲ. ಅದು ವಿಶುಯಲ್ಸ್ ಜೊತೆಗೇ ಆಗಬೇಕು. ವಿಶುವಲ್ಸ್ ನೋಡ್ತಿದ್ರೆ ಪಟಕ್ಕಂತ ಒಂದು ನೋಟ್ ಸಿಗುತ್ತೆ. ಎಲ್ಲಿಂದ ಶುರುಮಾಡಲಿ ಅಂತ ಹೊಳೆಯುತ್ತೆ. ಮೊದಲು ಟ್ಯೂನ್ ಮಾಡೋಕ್ಕೆ ಆಗೋದೇ ಇಲ್ಲ ನನಗೆ. ಸಂಭಾಷಣೆಗೂ ರಂಗಸಂಗೀತಕ್ಕೂ ಹೆಚ್ಚು ವ್ಯತ್ಯಾಸ ಇಲ್ಲದಿರೋದೇ ಇದಕ್ಕೆ ಕಾರಣ. ರಂಗಸಂಗೀತವೆಂದರೆ ಸಂಭಾಷಣೆಯದೇ ಒಂದು ಅಂಗ. ಮಾತು ಆಡು ಆಡುತ್ತಾ, ಮಾತು ಶುರು ಆಗೋದು ಎಲ್ಲಿ, ಸಂಗೀತ ಎಲ್ಲಿ ಸುರುವಾಗುತ್ತೆ ಅಂತ ಗೊತ್ತಾಗೋಲ್ಲ. ಎಂತಲೇ ರಂಗಸಂಗೀತವೆಂದರೆ ಅಲ್ಲೊಂದು ಮ್ಯೂಸಿಕ್ ಡೈರಕ್ಷನ್ ಅಂತ ಇರೋದಿಲ್ಲ. ಅಲ್ಲಿರೋದು ಧ್ವನಿವಿನ್ಯಾಸ, ಸೌಂಡ್ ಡಿಸೈನ್. ಉದಾಹರಣೆಗೆ ವಿಲನ್ ಬಂದಾಗ ಹೇಗೆ ಶೂ ಶಬ್ದ ಠಪ್, ಠಪ್ ಠಪ್ ಅಂತ ಮೂಡ್ ಸೃಷ್ಟಿಮಾಡಿಬಿಡುತ್ತದೆ. ಈ ಶಬ್ದಗಳಿಗನುಸಾರವಾಗಿಯೇ ದೃಶ್ಯ ಧ್ವನಿ ಕೂಡ ವಿನ್ಯಾಸಗೊಳ್ಳುತ್ತದೆ. ನನಗಂತೂ ಅಭಿನಯ ಕಂಡಾಗಲೇ ಅಥವಾ ನಾಟಕ ಅಭಿನೀತವಾದಾಗಲೇ ಸಂಗೀತ ಸರಿಯಾಗಿ ಸಿಕ್ಕೋದು.

ಆಕರ
೧ ರಂಗಸಂಗೀತವನ್ನು ಕುರಿತು ಬಿ ವಿ ಕಾರಂತರು,
ಲೋಕಚರಿತ, ಯುಟ್ಯೂಬ್
೨ ಇಕನಾಮಿಕ್ಸ್ ಟೈಮ್ಸ್‌ನಲ್ಲಿ ಪ್ರಕಟವಾದ ಕಾರಂತರ
ಸಂದರ್ಶನದ ಭಾಗಗಳು, ೩೧ ಆಗಸ್ಟ್, ೧೯೯೨
೩ ಯುಟ್ಯೂಬಿನಲ್ಲಿ ಕಾರಂತರ ಹಿಂದಿ ಸಂದರ್ಶನ.
೪ ವಾರ್ತಾ ಇಲಾಖೆಯ ವಾರ್ತಾಚಿತ್ರ.
೫ ಬಿ.ವಿ. ಕಾರಂತ – ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ
ಬದುಕಿನ ನೆನಪು ಮತ್ತು ಅನುಭವಗಳ ಕಥನ

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.