ಸಂತೋಷ ಅನ್ನೋದು ಕಾಸಿಗೆ ಸಿಗುತ್ತಾ?

 In Behavior Economics, ECONOMY

ಒಂದು ಸೊಗಸಾದ ಸಂಗೀತದ ಕಾರ್ಯಕ್ರಮ ಕೇಳ್ತಾ ಇದ್ದೀರಿ. ಅರ್ಧ ಗಂಟೆ ಅದರ ಸುಖ ಅನುಭವಿಸಿದ್ದೀರಿ. ಅದ್ಭುತವಾದ ಅನುಭವ. ಕೊನೆಗೆ ಒಂದು ಕರ್ಕಶ ಶಬ್ದ. ಅಯ್ಯೋ, ಎಲ್ಲಾ ಹಾಳಾಯಿತು ಅಂತ ಚೀರುತ್ತೀರಿ. ಆದರೆ ನಿಜವಾಗಿ ಎಲ್ಲಾ ಹಾಳಾಯ್ತಾ? ಖಂಡಿತಾ ಇಲ್ಲ. ಅರ್ಧ ಗಂಟೆ ಸೊಗಸಾದ ಸಂಗೀತ ಅನುಭವಿಸಿದ್ದೀರಿ. ಆದರೂ ಎಲ್ಲಾ ನಾಶವಾಯ್ತು ಅಂತ ಪರಿತಪಿಸುತ್ತೀರಿ.
ಹಾಗೇನೆ ರುಚಿರುಚಿಯಾದ ಕಡಲೇಕಾಯಿ ಬೀಜ ತಿನ್ನುತ್ತಿರುತ್ತೀರಿ. ಕೊನೆಗೆ ಒಂದು ಕಹಿಯಾದ ಬೀಜ ಸಿಕ್ಕರೆ ರುಚಿಯೆಲ್ಲಾ ಹಾಳಾಯ್ತು ಅಂತ ಒದ್ದಾಡುತ್ತೀರಿ. ನಿಜವಾಗಿ ನಾವು ಕಳೆದುಕೊಂಡದ್ದು ಏನು? ನಾವು ಕಳೆದುಕೊಂಡದ್ದು ಒಳ್ಳೆಯ ಸಂಗೀತದ, ಸೊಗಸಾದ ಕಡಲೆಕಾಯಿ ಬೀಜದ ರುಚಿಯ ನೆನಪನ್ನು ಮಾತ್ರ. ಆದರೆ ಸಂಗೀತವನ್ನು, ಕಡಲೆಕಾಯಿ ಬೀಜದ ರುಚಿಯನ್ನು ಅನುಭವಿಸಿರುತ್ತೀರಿ. ಆದರೂ ಎಲ್ಲಾ ಕಳೆದುಕೊಂಡ ಅನುಭವ. ಯಾಕೆ ಹೀಗೆ ಆಗುತ್ತದೆ?
ಡೇನಿಯಲ್ ಕನೆಮನ್ ಹೇಳೋ ಹಾಗೆ ನಮಗೆ ಎರಡು ಮನಸ್ಸು ಇರುತ್ತವಂತೆ. ಒಂದು ಅನುಭವಿಸುವ ಮನಸ್ಸು, ಇನ್ನೊಂದು ನೆನಪಿಟ್ಟುಕೊಳ್ಳುವ ಮನಸ್ಸು. ಅನುಭವಿಸುವ ಮನಸ್ಸು ಆ ಕ್ಷಣದ, ವರ್ತಮಾನಕ್ಕೆ ಸಂಬಂಧಿಸಿದ ಮನಸ್ಸು. ಅದು ವರ್ತಮಾನದಲ್ಲಿ ಬದುಕುತ್ತದೆ, ವರ್ತಮಾನವನ್ನು ಚೆನ್ನಾಗಿ ಗ್ರಹಿಸಿಕೊಳ್ಳುತ್ತದೆ. ಆದರೆ ನೆನಪಿನ ಮನಸ್ಸು ಕಥೆಗಾರ ಮನಸ್ಸು. ಅನುಭವದಲ್ಲಿ ನಾವು ಉಳಿಸಿಕೊಂಡದ್ದನ್ನು ಕಥೆ ಕಟ್ಟುವ ಮನಸ್ಸು. ಸಂಗೀತದ ವಿಷಯದಲ್ಲಾದ ಹಾಗೆ ಅನುಭವಗಳು ಕಳೆದುಹೋಗುತ್ತವೆ. ಉಳಿದುಕೊಳ್ಳುವುದು ನೆನಪುಗಳು ಮಾತ್ರ.
ಒಂದು ಪ್ರಯೋಗ ಮಾಡಿ ನೋಡಿ. ಒಬ್ಬನ ಕೈಯನ್ನು ಕೊರೆಯುವ ತಣ್ಣನೆ ನೀರಿನಲ್ಲಿ ಮೂರು ನಿಮಿಷ ಇಡಿ. ಇನ್ನೊಮ್ಮೆ ಅಷ್ಟೇ ತಣ್ಣಗಿರುವ ನೀರಿನಲ್ಲಿ ಮೂರು ನಿಮಿಷ ಇಟ್ಟು ನಂತರ ಕೊನೆಯ ಒಂದು ನಿಮಿಷ ಆ ನೀರನ್ನು ಸ್ವಲ್ಪ ಬೆಚ್ಚಗೆ ಮಾಡಿ. ಯಾವ ಅನುಭವ ಹಿತವಾಗಿತ್ತು ಅಂತ ಅವನನ್ನು ಕೇಳಿದರೆ ಎರಡನೆಯದು ಅನ್ನುವ ಉತ್ತರ ಬರುತ್ತದೆ. ಮೂರು ನಿಮಿಷದ ತೊಂದರೆಯನ್ನು ಕೊನೆಯ ಒಂದು ನಿಮಿಷದ ಬೆಚ್ಚಗಿನ ಅನುಭವ ಮರೆಸಿಬಿಡುತ್ತದೆ. ಕೊನೆಯ ಅನುಭವವೇ ಹೆಚ್ಚು ಕಾಲ ಉಳಿಯುವ ಅನುಭವಾಗಿಬಿಡುತ್ತದೆ.
ನಾವು ಯಾವಾಗಲೂ ನೆನಪುಗಳ ಮಧ್ಯೆಯೇ ನಮ್ಮ ಆಯ್ಕೆಗಳನ್ನು ಮಾಡಿಕೊಳ್ಳುತ್ತಿರುತ್ತೇವೆ. ಅನುಭವಗಳ ನಡುವೆ ನಮ್ಮ ಆಯ್ಕೆ ಇರುವುದಿಲ್ಲ.
ಸಂತೋಷದ ವಿಷಯ ಮಾತನಾಡುವಾಗ ಇಂತಹ ಎಷ್ಟೊ ವಿಷಯಗಳನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಇಲ್ಲದೇ ಹೋದರೆ ಹಲವಾರು ಗೊಂದಲಗಳು ಉಂಟಾಗುತ್ತವೆ. ಕೆಲವನ್ನು ಮಾತ್ರ ಇಲ್ಲಿ ಉಲ್ಲೇಖಿಸಲಾಗಿದೆ.
ಸಂತೊಷ ಯಾರಿಗೆ ಬೇಡ? ಎಲ್ಲರೂ ಅದಕ್ಕಾಗಿ ಹಪಹಪಿಸುತ್ತಾರೆ. ಸಂತೋಷಪಡೋದನ್ನು ಕಲಿಸೋದಕ್ಕೆ ಹಲವಾರು ಸಂಸ್ಥೆಗಳು ಹುಟ್ಟಿಕೊಂಡಿವೆ. ಇದರಿಂದ ಜನರಿಗೆ ಸಂತೋಷ ಸಿಕ್ಕಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅವುಗಳಂತೂ ಚೆನ್ನಾಗಿ ದುಡ್ಡು ಮಾಡುತ್ತಿವೆ.
ಆದರೂ ದುಡ್ಡಿನ ಬಗ್ಗೆಯೇ ಯೋಚಿಸುವ ಅರ್ಥಶಾಸ್ತ್ರಜ್ಞರು ಸಂತೋಷದ ಬಗ್ಗೆ ಇತ್ತೀಚಿನವರೆಗೂ ತಲೆಕೆಡಿಸಿಕೊಂಡಿರಲಿಲ್ಲ. ಸಂತಸದ ವಿಷಯವೆಂದರೆ ಇತ್ತೀಚಿನ ದಿನಗಳಲ್ಲಿ ಅರ್ಥಶಾಸ್ತ್ರಜ್ಞರು ಅದನ್ನು ಅಧ್ಯಯನ ಮಾಡಲು ಪ್ರಾರಂಭಿಸಿದ್ದಾರೆ. ಹಲವು ಗ್ರಂಥಗಳು ಬಂದಿವೆ.
ಸಂತೋಷ ಅಂದರೇನು? ಅದು ಯಾವುದರಿಂದ ಸಿಗುತ್ತದೆ? ಹಣದಿಂದ ಅದನ್ನು ಕೊಂಡುಕೊಳ್ಳಬಹುದಾ? ಹಣ ಹೆಚ್ಚಾದಂತೆ ಸಂತೋಷ ಅನ್ನೋದು ಹೆಚ್ಚಾಗುತ್ತದಾ? ಅದನ್ನು ಅಳೆಯುವುದಕ್ಕೆ ಸಾಧ್ಯವಾ? ಇತ್ಯಾದಿ ಹಲವು ಪ್ರಶ್ನೆಗಳನ್ನು ಗಮನಿಸಲಾಗಿದೆ.
ನಾವು ಅನುಭವಿಸಿದ ಸಂತೋಷವನ್ನು ಅಳೆಯುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳು ನಡೆದಿವೆ. ಉದಾಹರಣೆಗೆ ಯು-ಇಂಡೆಕ್ಸ್ ಅಥವಾ ಯು-ಸೂಚಿ ಅನ್ನುವ ಒಂದು ಕ್ರಮ ಇದೆ. ಅದು ಕನೆಮನ್ ಬೆಳೆಸಿದ್ದು. ಅವನು ಮಾಡಿದ್ದು ಇಷ್ಟು. ಜನರ ಒಟ್ಟಾರೆ ಸಂತಸದ ಕ್ಷಣಗಳನ್ನು ಲೆಕ್ಕಹಾಕೋದು. ಅಂದರೆ ಪ್ರೀತಿ, ಖುಷಿ, ಸಂತೋಷ, ಆಸೆ, ವಿನೋದ ಇತ್ಯಾದಿ ಸಂತಸದಲ್ಲಿ ಕಳೆದ ಒಟ್ಟು ಸಮಯವನ್ನು ಕೂಡಿಕೊಳ್ಳೋದು. ಹಾಗೆಯೇ ಬೇಸರದ ಗಳಿಗೆಗಳನ್ನು ಕೂಡಿಕೊಳ್ಳುವುದು. ಅಂದರೆ ಒಟ್ಟಾರೆ ಕೋಪ, ಅವಮಾನ, ಖಿನ್ನತೆ, ಒಂಟಿತನ ಇತ್ಯಾದಿಗಳನ್ನು ಅನುಭವಿಸಿದ ಸಮಯವನ್ನು ಅಳತೆ ಮಾಡೋದು. ಬೇಸರದ ಸಮಯವೇ ಹೆಚ್ಚಾದರೆ ಆಗ ಸಂತೋಷ ಋಣಾತ್ಮಕವಾಗುತ್ತದೆ. ಇಲ್ಲದಿದ್ದರೆ ಧನಾತ್ಮಕವಾಗಿರುತ್ತದೆ. ಅವೆರಡರ ನಡುವಿನ ವ್ಯತ್ಯಾಸವನ್ನು ಯು-ಸೂಚಿ ಅಥವಾ ಅನ್‌ಪ್ಲೆಸೆಂಟ್ ಸೂಚಿ- ಅಹಿತಕರಸೂಚಿ ಅಂತ ಕರೆದ. ಉದಾಹರಣೆಗೆ, ಕೆಲಸದ ಆವಧಿಯಲ್ಲಿ ಒಬ್ಬ ಕಾರ್ಮಿಕನ ಯು-ಸೂಚಿ ಶೇಕಡ ೨೫ ಇದೆ ಅಂದರೆ ಅವನು ಒಟ್ಟು ಎಂಟು ಗಂಟೆ ದುಡಿದರೆ ಅದರಲ್ಲಿ ೨ ಗಂಟೆಗಳ ಕಾಲ ಅವನು ಸಂತೋಷವಾಗಿರುವುದಿಲ್ಲ.
ಈಗ ಹಲವಾರು ಸಂಸ್ಥೆಗಳು ಸಂತೋಷವನ್ನು ಲೆಕ್ಕಹಾಕಿ ವಿಭಿನ್ನ ಸೂಚ್ಯಂಕಗಳನ್ನು ಪ್ರಕಟಿಸುತ್ತಿದ್ದಾರೆ. ಅಮೇರಿಕೆ, ಕೆನಡಾ ಹಾಗೂ ಯೂರೋಪ್ ಪ್ರತಿವರ್ಷ ತಮ್ಮ ದೇಶಗಳಿಗೆ ಸಂಬಂಧಿಸಿದಂತೆ ಇಂತಹ ಸೂಚಿಯನ್ನು ಪ್ರಕಟಿಸುತ್ತಿವೆ. ಗ್ಯಾಲಪ್ ವರ್ಲ್ಡ್ ಪೋಲ್ ಲಕ್ಷಾಂತರ ಜನರಿಂದ ಮಾಹಿತಿ ಸಂಗ್ರಹಿಸಿ ೧೫೦ಕ್ಕೂ ಹೆಚ್ಚು ದೇಶಗಳಿಗೆ ಸಂಬಂಧಿಸಿದಂತೆ ಇಂತಹ ಅಂಕಿಅಂಶವನ್ನು ಪ್ರಕಟಿಸುತ್ತದೆ. ಫೆಬ್ರವರಿ ೨೦ನ್ನು ಜಾಗತಿಕ ಸಂತಸದ ದಿನವಾಗಿ ಆಚರಿಸಲಾಗುತ್ತದೆ. ಭೂತಾನ್, ಇಕ್ವಡಾರ್, ವೆನಿಜುಲ ದೇಶಗಳಲ್ಲಿ ಸಂತೋಷಕ್ಕೆ ಅಂತ ಮಂತ್ರಿಗಳನ್ನೂ ನೇಮಿಸಿದ್ದಾರೆ. ನಮ್ಮಲ್ಲೂ ಅಚ್ಚೆ ದಿನಗಳ ಮಾತನ್ನು ಆಡುತ್ತಿದ್ದಾರೆ. ಆದರೆ ಇತ್ತೀಚಿನ ಜಾಗತಿಕ ಸಂತಸದ ವರದಿಯಲ್ಲಿ ಭಾರತ ೧೫೫ ರಾಷ್ತ್ರಗಳಲ್ಲಿ ೧೨೨ನೇ ಸ್ಥಾನದಲ್ಲಿ ಇದೆ. ಕಳೆದ ವರ್ಷ ೧೧೮ನೇ ಸ್ಥಾನದಲ್ಲಿತ್ತು. ಸೊಮಾಲಿಯ, ಚೀನಾ, ಪಾಕಿಸ್ತಾನ ಇವೆಲ್ಲಾ ನಮಗಿಂತ ಮೇಲಿವೆ.
ಗ್ಯಾಲಪ್ ವರ್ಲ್ಡ್ ಪೋಲ್ ಸಂಸ್ಥೆಯ ವರದಿಯನ್ನು ಆಧರಿಸಿ ಡೇನಿಯಲ್ ಕನೆಮನ್ ಹಾಗೂ ಅಂಗಸ್ ಡೆಟನ್ (ಇವರಿಗೂ ಅರ್ಥಶಾಸ್ತ್ರದಲ್ಲಿ ನೋಬೆಲ್ ಬಹುಮಾನ ಬಂದಿದೆ) ಒಂದು ಅಧ್ಯಯನವನ್ನು ಮಾಡಿದ್ದಾರೆ. ಅದು ತೀವ್ರ ಚರ್ಚೆಗೆ ಒಳಗಾಗಿದೆ. ಅದು ಹಲವು ಪ್ರಮುಖ ಅಂಶಗಳನ್ನು ಚರ್ಚಿಸಿದೆ. ಉದಾಹರಣೆಗೆ ಹಣದಿಂದ ಸಂತೋಷ ಸಿಗುತ್ತದಾ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುತ್ತಾ ಹೆಚ್ಚು ಹಣ ಹೆಚ್ಚಿನ ಸಂತೋಷವನ್ನು ತಂದುಕೊಡದೇ ಇರಬಹುದು ಆದರೆ ಬಡತನದಿಂದ ಭಾವನಾತ್ಮಕವಾಗಿ ನೋವಂತೂ ಆಗುತ್ತದೆ ಎಂಬ ತಿರ್ಮಾನಕ್ಕೆ ಬರುತ್ತದೆ. ಒಂದು ಹಂತದವರಗೆ ಶ್ರೀಮಂತಿಕೆ ತೃಪ್ತಿಯನ್ನು ಹೆಚ್ಚಿಸುತ್ತದೆ. ಆ ಮಿತಿಯನ್ನು ಅವರು ಅಮೇರಿಕೆಯ ಉದಾಹರಣೆಯನ್ನು ಇಟ್ಟುಕೊಂಡು ೭೫,೦೦೦ ಡಾಲರ್ ಎಂದು ೨೦೦೮ರಲ್ಲಿ ನಿರ್ಧರಿಸಿದ್ದರು. ಅಲ್ಲಿಂದ ಮುಂದಕ್ಕೆ ಜನರ ಭಾವನಾತ್ಮಕ ಒಳಿತಿಗೆ ಬೇಕಾದ್ದನ್ನು ಪಡೆದುಕೊಳ್ಳುವ ಸಾಮರ್ಥ್ಯವನ್ನು ಹಣ ತಂದುಕೊಡುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಆರ್ಥಿಕೇತರ ಕಾರಣಗಳು ನಿರ್ಣಾಯಕವಾಗುತ್ತವೆ.
ಹಾಗೆಯೇ ಹೆಚ್ಚು ಶ್ರೀಮಂತ ದೇಶಗಳು ಬಡರಾಷ್ಟ್ರಗಳಿಗಿಂತ ಹೆಚ್ಚು ಸಂತೋಷವಾಗಿರುತ್ತವೆ. ಆದರೆ ಒಂದೇ ಮಟ್ಟದ ಶ್ರೀಮಂತಿಕೆಯನ್ನು ಪಡೆದಿರುವ ರಾಷ್ಟ್ರಗಳ ಪ್ರಜೆಗಳು ಸಮಾನ ಸುಖಿಗಳಾಗಿರುವುದಿಲ್ಲ. ಅದಕ್ಕೆ ಆರ್ಥಿಕೇತರ ಕಾರಣಗಳು ಮುಖ್ಯವಾಗುತ್ತದೆ. ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿ ಹೇಳುವುದಾದರೆ ನಿರುದ್ಯೋಗ, ಹಣದುಬ್ಬರ, ಅಸಮಾನತೆ ಇವೆಲ್ಲಾ ದುಃಖವನ್ನು ಹೆಚ್ಚಿಸುವ ಅಂಶಗಳು. ಹಾಗೆಯೇ ಸಾಮಾಜಿಕ ಕ್ಷೇತ್ರಕ್ಕೆ ಸಂಬಂಧಿಸಿ ಹೇಳುವುದಾದರೆ ಆರೋಗ್ಯ, ಕೌಟಂಬಿಕ ಸಂಬಂಧಗಳು, ಸ್ನೇಹ, ಶಿಕ್ಷಣ, ರಕ್ಷಣೆ ಹೀಗೆ ಹಲವು ಅಂಶಗಳು ಮುಖ್ಯವಾಗುತ್ತವೆ. ಈ ಎಲ್ಲಾ ಅಂಶಗಳೂ ತಮ್ಮದೇ ಆದ ರೀತಿಯಲ್ಲಿ ಮನುಷ್ಯನ ಸಂತೋಷವನ್ನು ಪ್ರಭಾವಿಸುತ್ತಿರುತ್ತವೆ.
ಮಹಿಳೆಗೆ ಸಾಮಾನ್ಯವಾಗಿ ಗಂಡಸಿಗಿಂತ ಕೂಲಿ ಕಡಿಮೆ. ಆದರೆ ಮಹಿಳೆಯರು ಮತ್ತೊಬ್ಬ ಮಹಿಳೆಯೊಂದಿಗೆ ತಮ್ಮ ಕೂಲಿಯನ್ನು ಹೋಲಿಸಿಕೊಳ್ಳುವವರೆಗೆ ಅವರನ್ನು ಅತೃಪ್ತಿ ಅಷ್ಟಾಗಿ ಕಾಡುವುದಿಲ್ಲ. ಆದರೆ ಸಮಾನತೆಯ ಅರಿವು ಮೂಡಿದೊಡನೆ, ಪುರುಷನೊಂದಿಗೆ ಹೋಲಿಕೆ ಪ್ರಾರಂಭವಾಗುತ್ತದೆ. ಆಗ ಅತೃಪ್ತಿ ಪ್ರಾರಂಭವಾಗುತ್ತದೆ. ಪಕ್ಕದವರಿಗೆ ನಿಮಗಿಂತ ಹೆಚ್ಚು ಸಿಕ್ಕರೆ ನಿಮ್ಮ ಸಂತೋಷ ಕಡಿಮೆಯಾಗುತ್ತದೆ. ಅಂದರೆ ಸಂತೋಷ ಅನ್ನೋದು ಸಾಪೇಕ್ಷ. ಐದು ಕಡಲೆಕಾಯಿ ಬೀಜ ತಿಂದುಕೊಂಡ ತೃಪ್ತಿಯಾಗಿದ್ದ ಕೋತಿಗೆ ಪಕ್ಕದ ಕೋತಿಗೆ ಆರು ಕಡಲೆಕಾಯಿ ಬೀಜ ಸಿಕ್ಕಿತು ಅಂತ ಗೊತ್ತಾದ ತಕ್ಷಣ ಬೇಸರವಾಗುತ್ತದೆ. ಸಂತೋಷ ಅನ್ನೋದರಲ್ಲಿ ಇಂತ ಎಷ್ಟೋ ಸೂಕ್ಷ್ಮಗಳು ಇರುತ್ತವೆ.
ಹಾಗಾಗಿ ಸರ್ಕಾರಗಳು ನೀತಿಯನ್ನು ರೂಪಿಸುವಾಗ ಕೇವಲ ಜಿಡಿಪಿಯ ಹಿಂದೆ ಹೋಗುವುದಕ್ಕಿಂತ ಜನರ ಜೀವನವನ್ನು ಹಲವು ದಿಕ್ಕಿನಲ್ಲಿ ಸುಧಾರಿಸುವುದಕ್ಕೆ ಗಮನ ಕೊಡಬೇಕು. ಹೆಚ್ಚುತ್ತಿರುವ ಅಸಮಾನತೆ, ನಿರುದ್ಯೋಗ, ಪೌಷ್ಟಿಕಾಂಶದ ಕೊರತೆ, ಬಡತನ, ಶಿಕ್ಷಣ, ಆರೋಗ್ಯ ಇತ್ಯಾದಿಗಳಿಗೆ ಮಹತ್ವ ನೀಡಬೇಕು. ಇವೆಲ್ಲಾ ಒಟ್ಟಾರೆಯಾಗಿ ಮನುಷ್ಯರ ಸಂತೋಷದ ಅನುಭವವನ್ನು, ಭಾವನಾತ್ಮಕ ಒಳಿತನ್ನು ಹೆಚ್ಚಿಸುತ್ತದೆ. ಅವರನ್ನು ಸುಖವಾಗಿಡುತ್ತದೆ.
ಟಿ ಎಸ್ ವೇಣುಗೋಪಾಲ್

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.