ಸತ್ತಿದ್ದಾರೆಂದುಕೊಂಡವರು ಎದುರು-ಬದರು ಆದಾಗ!

 In GANDHI

Devanoor Mahadeva‘ಗ್ರಾಮಸ್ವರಾಜ್ : ಗಾಂಧಿ ಅಂಬೇಡ್ಕರ್ – ಒಂದು ಅನುಸಂಧಾನ’ – ಈ ಚಚರ್ೆಗೆ ನೀವೂ ಬನ್ನಿ ಎಂದು ನನ್ನನ್ನು ಕರೆದಾಗ – ‘ಏನು ಜಗಳವನ್ನು ಸರಸ ಮಾಡಬೇಕು ಅಂತಿದ್ದಿರಾ ಹೇಗೆ?’ ಎಂದು ತಮಾಷೆ ಮಾಡಿದೆ. ಆ ಇಬ್ಬರ ನಡುವೆ ಜಗಳ ಇಂದೂ ನಡೆಯುತ್ತಿದೆ. ಅದು ತೀವ್ರವಾಗೂ ಇದೆ. ಇದರ ಅರ್ಥ – ಆ  ಇಬ್ಬರೂ ಇನ್ನೂ ಸತ್ತಿಲ್ಲ ಅಂತಲೇ ಅರ್ಥ. ಇಂದೂ ಅವರು ಹೆಚ್ಚು ಜೀವಂತವಾಗಿದ್ದಾರೆ ಅಂತಲೂ ಅರ್ಥ.
ಇದನ್ನು ನಾನು ಒಂದು ಶುಭಸೂಚನೆಯಾಗಿ   ನೋಡುತ್ತೇನೆ. ಜಾಗತೀಕರಣದ ಅಟ್ಟಹಾಸದಲ್ಲಿ ವ್ಯಾಪಾರ ಕುಣಿದು ಕುಪ್ಪಳಿಸುತ್ತಾ ಈ ವ್ಯಾಪಾರವೇ ಆಳ್ವಿಕೆಯಾಗಿ ಎಲ್ಲಾ ಸೈದ್ಧಾಂತಿಕ ಆಲೋಚನೆಗಳೂ, ಹೋರಾಟಗಳೂ ಕಣ್ಮರೆಯಾಗುತ್ತಿದೆ ಎಂದು ಎಲ್ಲರೂ ನಂಬುತ್ತಿರುವ ಈ ದುಸ್ಥಿತಿಯಲ್ಲಿ ಈ ಇಬ್ಬರ ಜೀವಂತಿಕೆಯು ಮುಳುಗುವವರಿಗೆ ಒಂದು ಹುಲ್ಲುಕಡ್ಡಿ ಸಿಕ್ಕಂತೆ ನನಗೆ ಕಾಣಿಸುತ್ತದೆ.
ಇವರ ಜಗಳಕ್ಕೆ ಹೋಗುವ ಮುನ್ನ ಈ ಜಗಳಾಡುವವರ ನಡುವೆ ಆಗಾಗ ಮಿಂಚಿನಂತೆ ಕಾಣುವ ಪರಸ್ಪರ ಗೌರವ, ನಂಬಿಕೆ, ಮೆಚ್ಚಿಗೆಗಳ   ಒಂದೆರಡು ಉದಾಹರಣೆಗಳನ್ನು ಕೊಡುವೆ.  ನಂತರ ಜಗಳಕ್ಕೆ ಖಂಡಿತ ಹೋಗುವ.
ಶ್ರೀ ಭಗವಾನ್ದಾಸ್ ಅವರು ಸಂಪಾದಿಸಿರುವ ‘ದಸ್ ಸ್ಪೋಕ್ ಅಂಬೇಡ್ಕರ್’ – ಮೊದಲ ಸಂಪುಟದಲ್ಲಿನ ಉಲ್ಲೇಖದಂತೆ ಅಂಬೇಡ್ಕರ್ ಅವರು ಗಾಂಧಿಯವರ ಬಗ್ಗೆ ಪೂನಾ ಒಪ್ಪಂದದ ನಂತರ ಕೊಟ್ಟ ಹೇಳಿಕೆಯಲ್ಲಿ ‘ನನ್ನ ಮತ್ತು ಆತ (ಗಾಂಧಿ)ನ ಮಧ್ಯೆ ಎಷ್ಟೊಂದು ಸಾಮ್ಯವಿದೆ ಎಂಬುದನ್ನು ಆತನನ್ನು ಭೇಟಿ ಮಾಡಿದಾಗ ತಿಳಿದು ನನಗೆ ಆಶ್ಚರ್ಯವಾಗಿದೆ, ಅತ್ಯಾಶ್ಚರ್ಯವಾಗಿದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ’ ಎನ್ನುತ್ತಾರೆ. ಇದನ್ನು ಯಾವ ರೀತಿ ಅರ್ಥ ಮಾಡಿಕೊಳ್ಳೋಣ? ಹಾಗೇ ಗಾಂಧೀ 1946ರಲ್ಲಿ ಗೋರಾ ಅವರ ಅಳಿಯನಿಗೆ ‘ನೀನು ಅಂಬೇಡ್ಕರ್ರಂತೆ ಆಗಬೇಕು. ನೀನು ಅಸ್ಪೃಶ್ಯತೆಯ ಹಾಗೂ ಜಾತಿಯ ನಿಮರ್ೂಲನಕ್ಕಾಗಿ ಕೆಲಸ ಮಾಡಬೇಕು. ಯಾವ ಬೆಲೆ ತೆತ್ತಾದರೂ ಸರಿಯೇ ಅಸ್ಪೃಶ್ಯತೆಯು ಹೋಗಲೇಬೇಕು’ ಎಂದು ಹೇಳುತ್ತಾರೆ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳೋಣ? ‘ಸಂಸ್ಕೃತಿ ಕಥನ’ದಲ್ಲಿ ಡಿ.ಆರ್. ನಾಗರಾಜ್ ದಾಖಲಿಸಿರುವಂತೆ ಎಲ್ಲರೂ ಗಾಂಧಿಗೆ ಮಹಾತ್ಮ ಎನ್ನುತ್ತಿದ್ದಾಗ ಆ ಮಹಾತ್ಮನೇ ಅಂಬೇಡ್ಕರರನ್ನು ಮಹಾತ್ಮ ಅನ್ನುತ್ತಾರೆ. ಇದೇನು? ಇದೆಲ್ಲವೂ, ಈ ಅವರ ಜಗಳವೂ ಆ ಮಹಾತ್ಮರಿಬ್ಬರ ಕೊಡುಕೊಳ್ಳುವಿಕೆಯೇ?
ಹೀಗಿದ್ದೂ ಯಾಕೆ ವಿರಸ ಎಂದು ನೋಡಿದರೆ – ಗಾಂಧಿ ಹುಟ್ಟುತ್ತ ಸನಾತನಿ, ಕರ್ಮಠ. ನಡೆಯುತ್ತಾ, ಎಡವುತ್ತಾ, ಬೆಳೆಯುತ್ತಾ ಪ್ರಗತಿಪರ. ಭಾರತವನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡಿರುವ  ಆ ಸನಾತನಿಗಳೂ, ಕರ್ಮಠರೂ ಕೂಡ ತನ್ನೊಡನೆ ಹೆಜ್ಜೆ ಇಡುತ್ತಿರುವವರೆ ಇಲ್ಲವೆ ಎಂಬುದನ್ನು ಸದಾ ಕಡೆಗಣ್ಣಿನಿಂದಲೇ ಗಮನಿಸುತ್ತ  ಅವರನ್ನೂ ಜೊತೆಜೊತೆಗೇ ಎಳೆದುಕೊಂಡು ಹೆಜ್ಜೆ ಇಡುವಾತ ಗಾಂಧಿ. ಹಾಗೇ ಇತಿಹಾಸಕಾರ ಎಸ್.ಚಂದ್ರಶೇಖರ್ ‘ಗಾಂಧೀಜಿಯ ಕಾರ್ಯ ರಾಜಕೀಯದಿಂದ ಸಾಮಾಜಿಕದತ್ತ ಇಳಿದು ಬಂದರೆ, ಅಂಬೇಡ್ಕರ್ಅವರು  ಸಾಮಾಜಿಕ ಕಾರ್ಯದಿಂದ ರಾಜಕೀಯ ಕಣಕ್ಕೆ ಏರಿದವರು’ ಎಂದು ಹೇಳುತ್ತಾರೆ. ಈ ಬಗೆಯ ಚಲನೆ ಕಾರಣವಾಗಿ ಗಾಂಧಿ ಅಂಬೇಡ್ಕರ್ ನಡುವೆ ಘರ್ಷಣೆ ಉಲ್ಬಣಗೊಂಡಿತೆ? ಜೊತೆಗೆ ಇಬ್ಬರೂ ಸಮಕಾಲೀನರು. ಆಯಾಯ ದಿನಕ್ಕೆ ಪ್ರತಿಕ್ರಿಯಿಸಲೇಬೇಕಿತ್ತು. ಇದರೊಡನೆ ದುಂಡುಮೇಜಿನ ಪರಿಷತ್ನಲ್ಲಿ ಗಾಂಧಿ ಕ್ಷುದ್ರವಾಗಿ ನಡೆದುಕೊಂಡು ಅಂಬೇಡ್ಕರ್ಗೆ ಗಾಯಮಾಡಿಬಿಟ್ಟರು. ಈ ಎಲ್ಲಾ ಹಿನ್ನೆಲೆಯಲ್ಲಿ ಅಂಬೇಡ್ಕರ್ರ ಪ್ರತಿಕ್ರಿಯೆಗಳನ್ನು ಅರ್ಥಮಾಡಿಕೊಳ್ಳಬೇಕೇ ಹೊರತು ಅಂದರೆ ಆಯಾ ಕಾಲದ ಪ್ರತಿಕ್ರಿಯೆಗಳನ್ನು ಆಯಾ ಕಾಲದ ಸಂದರ್ಭಕ್ಕೆ ಮಾತ್ರ ಸೀಮಿತಗೊಳಿಸಿ ಅವರನ್ನು ಒಟ್ಟಾಗಿ ಅರ್ಥಮಾಡಿಕೊಳ್ಳಬೇಕೇ ಹೊರತು ಅವರ ಸಾಂದಭರ್ಿಕ ಅಭಿಪ್ರಾಯಗಳನ್ನು ಕಟ್ಟುಗಾಜು ಹಾಕಿಸಿ ಸ್ಥಿರಗೊಳಿಸಿ ನೇಣಿಗೇರಿಸಬಾರದು. ಹಾಗೇ ಗಾಂಧಿಯನ್ನೂ ಕೂಡ.
  ಅವರ ಜಗಳ ಜಟಾಪಟಿಗೆ ಗಾಂಧಿ ಮತ್ತು ಅಂಬೇಡ್ಕರರ ಗ್ರಹಿಕೆಗೆ ಭಾರತದ ಹಳ್ಳಿಯು ಹೇಗೆ ಕಾಣುತಿತ್ತು ಎಂಬುದೂ ಮುಖ್ಯವಾಗುತ್ತದೆ.   ಗಾಂಧಿ ಹಳ್ಳಿಯನ್ನು ಸ್ವಯಂಭೂ ಸ್ವರ್ಗವಾಗಿಸುವ ಕನಸು ಕಂಡವರು. ಆದರೆ ಅಂಬೇಡ್ಕರ್ ಹಳ್ಳಿಗಳನ್ನು ನರಕದ ಕೂಪ ಅಂದುಕೊಂಡಿದ್ದರು. ಹಳ್ಳಿಯೇ ಭಾರತಕ್ಕೆ ಮೋಕ್ಷ ಎಂದು ಗಾಂಧಿ ಅಂದುಕೊಂಡಿದ್ದರೆ, ಅಂಬೇಡ್ಕರ್ ಭಾರತದಿಂದಲೇ ಹಳ್ಳಿಯನ್ನು ಮೋಕ್ಷ ಮಾಡಬೇಕು ಅಂದುಕೊಂಡಿದ್ದರು. ‘ಒಬ್ಬರಿಗೆ ರಮ್ಯ ಕನಸಾದರೆ ಇನ್ನೊಬ್ಬರಿಗೆ ಕಟು ವಾಸ್ತವವಾಗಿತ್ತು’ – ಆಗ ವಾಸ್ತವವೂ ಹಾಗೆ ಇತ್ತು. ಹಳ್ಳಿಗಳ ತಳಸಮುದಾಯಗಳು ಉಸಿರಾಡದೆ ಇದ್ದವು. ಆಗ ಅಂಬೇಡ್ಕರರಿಗೆ ಹಳ್ಳಿ ದುಃಸ್ವಪ್ನದಂತೆ ಕಂಡಿದ್ದರೆ ಅದರಲ್ಲೇನು ಆಶ್ಚರ್ಯ?  ಆದರೆ ಈಗ? ಈಗ ಯಾವುದೇ ಒಂದು  ಹಳ್ಳಿ ನೋಡಿದರೆ, ಮಂಡಲ ಪಂಚಾಯ್ತಿ ವ್ಯವಸ್ಥೆ ಬಂದ ಮೇಲೆ ಎಲ್ಲಾ ಜಾತಿಗಳ ಒಳಗೂ ನಾಕಾರು ಪಕ್ಷಗಳಿಗೆ  ಅನುಗುಣವಾಗಿ ನಾಕಾರು ಗುಂಪುಗಳಾಗಿವೆ. ಇದು ಪಕ್ಷ  ಸ್ಪಧರ್ೆ ಕಾರಣವಾಗಿ ತಾತ್ಕಾಲಿಕ ನಿಜ. ಈ ಕ್ರಿಯೆಯೊಳಗೆ   ಜಾತಿಬಿಟ್ಟ ಚಲನೆಯೂ ಸ್ವಲ್ಪವಾದರೂ ಇದೆ.ಇದನ್ನೂ ನಾವು ಗಮನಿಸಬೇಕು. ಜೊತೆಗೆ ಮಂಡಲ ಪಂಚಾಯ್ತಿ ಅಧಿಕಾರ ಸ್ಥಾನಮಾನಗಳಿಗೆ ಮೀಸಲಾತಿ ಬಂದು ನಮ್ಮೂರಲ್ಲೇ ದಲಿತ ಹೆಣ್ಣುಮಗಳೊಬ್ಬಳು ಅಧ್ಯಕ್ಷೆಯೂ ಆಗಿಬಿಟ್ಟಳು. ನನ್ನ ಬಾಲ್ಯದಲ್ಲಿ ಆ ಊರಿನ ಗ್ರಾಮಪಂಚಾಯ್ತಿ ಕಛೇರಿ ಒಳಕ್ಕೆ ಅಸ್ಪೃಶ್ಯರು ಹೋಗುವುದನ್ನು ಕಲ್ಪಿಸಿಕೊಳ್ಳಲೂ ಕಷ್ಟವಾಗುತ್ತಿದ್ದ ನನಗೆ ಇದಾಗಿರುವುದು ಕಣ್ಮುಂದೆ ಇದೆ. ಈ ಚಲನೆಯನ್ನೂ ನಾವು ಕಾಣಬೇಕಲ್ಲವೇ?
ಈ ಗೊಂದಲದೊಳಗೆ ನಾವು ಗಾಂಧಿಯವರ ಸಮಕಾಲೀನರಾಗಿ ನೋಡಿದರೆ, ಗಾಂಧಿಯವರ 1920ರ  ಸುಮಾರಿನ   ಅಭಿಪ್ರಾಯಗಳನ್ನು ಅಂದರೆ – 1. ಹಿಂದೂಧರ್ಮ ಜಾತಿಪದ್ಧತಿಯ ಆಧಾರದ ಮೇಲೆ ಸ್ಥಾಪಿತ 2. ಸ್ವರಾಜ್ಯದ ಬೀಜಗಳು ಜಾತಿಪದ್ಧತಿಯಲ್ಲಿದೆ 3. ಸಮಾಜದ ನಿಯಂತ್ರಣಕ್ಕೆ ಮತ್ತೊಂದು ಹೆಸರೇ ಜಾತಿ 4. ರಾಷ್ಟ್ರೀಯ ಐಕ್ಯತೆಗೆ ಸಹಭೋಜನ, ಅಂತಜರ್ಾತಿ ವಿವಾಹಗಳ ಅಗತ್ಯವಿಲ್ಲ. 5. ಜಾತಿಪದ್ಧತಿ ಸಮಾಜವೊಂದರ ಸ್ವಾಭಾವಿಕ ಶ್ರೇಣೀಕರಣ. 6. ಜಾತಿಪದ್ಧತಿ ನಾಶಪಡಿಸಲು ಯತ್ನಿಸುವ ಯಾರದೇ ಪ್ರಯತ್ನಗಳಿಗೂ ನನ್ನ ವಿರೋಧವಿದೆ ಇತ್ಯಾದಿ ಇತ್ಯಾದಿ 1920ರ ಆಜುಬಾಜಿನ ಗಾಂಧಿ ಆಲೋಚನೆಗಳನ್ನು ನಾವೂ ಆ ಕಾಲಮಾನದಲ್ಲಿದ್ದರೆ ಅವನ್ನು  ವಿರೋಧಿಸಬೇಕಾಗುತ್ತದೆ, ಪ್ರತಿಭಟಿಸಬೇಕಾಗುತ್ತದೆ, ಅಂಬೇಡ್ಕರ್ ಅವರಷ್ಟೇ ಉಗ್ರವಾಗಿ. ಆದರೆ ಆ ಕರ್ಮಠ ಸನಾತನಿ ಗಾಂಧಿ ಅಲ್ಲೇ ಉಳಿಯುವುದಿಲ್ಲ. ದಿನದಿನವೂ ಸತ್ತು ದಿನದಿನವೂ ಹುಟ್ಟುತ್ತಾನೆ. 1928ರ ಹೊತ್ತಿಗೆ ಒಂದೇ ವರ್ಣದ ಉಪಜಾತಿಗಳ ಜತೆ ಅಂತರ್ವಿವಾಹವನ್ನು ಪ್ರೋತ್ಸಾಹಿಸುವ ಗಾಂಧಿ ಒಂದೊಂದೇ ಹೆಜ್ಜೆ ಇಡುತ್ತ 1946ರ ಹೊತ್ತಿಗೆ ಸವರ್ಣ ಹಿಂದು ಮತ್ತು ಹರಿಜನರ ನಡುವೆ ನಡೆಯುವ ಅಂತರ್ವಿವಾಹಗಳಿಗೆ ಮಾತ್ರವೇ ತಾವು ಹೋಗುವುದಾಗಿ ನೇಮ ಮಾಡಿಕೊಳ್ಳುತ್ತಾರೆ. ಮುಂದೆ ವಧುವರರಲ್ಲೊಬ್ಬರು ಹರಿಜನರಲ್ಲದ ಪಕ್ಷದಲ್ಲಿ ಸೇವಾಗ್ರಾಮದಲ್ಲಿ ಮದುವೆಯಾಗುವ ಅವಕಾಶವನ್ನೇ ನಿರಾಕರಿಸುತ್ತಾರೆ. ಇನ್ನೂ ಮುಂದೆ ‘ನಾವು ಅಸ್ಪೃಶ್ಯತೆಯನ್ನು ನಿಮರ್ೂಲ ಮಾಡಬೇಕೆಂದರೆ ಜಾತಿಯೂ ಹೋಗಲೇಬೇಕು’ ಎಂಬಲ್ಲಿಗೆ ಬಂದು ನಿಲ್ಲುತ್ತಾರೆ. 1946ರ ಗಾಂಧಿ ಆಲೋಚನೆಗಳು 1920ರಲ್ಲಿಯೇ ಕಾಣಿಸಿಕೊಂಡಿದ್ದರೆ ಏನಾಗುತ್ತಿತ್ತು? ಭಾರತದ ಜಾತಿಧರ್ಮಗಳು ಆ ಗಾಂಧಿಯನ್ನೇ ಅಡ್ಡಡ್ಡ ನುಂಗಿ ನೊಣೆದುಬಿಡುತ್ತಿದ್ದವು. ಈ ಗಾಂಧೀಯೇ ಇರುತ್ತಿರಲಿಲ್ಲ. ಜೊತೆಗೆ ಭಾರತೀಯ ಜಾತಿ ವರ್ಣ ಸಮಾಜ ಸ್ವಲ್ಪವೂ ಅಲುಗಾಡದೆ ತಲೆ ಎತ್ತುವ ಅಸ್ಪೃಶ್ಯರ ಬಲಿ ತೆಗೆದುಕೊಳ್ಳುವುದನ್ನೇ ಧರ್ಮವೆಂದುಕೊಳ್ಳುತ್ತಿತ್ತು.  ಇದನ್ನೂ ನಾವು ಕಾಣಬೇಕು. ಆದರೂ ಅಷ್ಟೊಂದು ಬೆಳವಣಿಗೆ ಒಂದೇ ಜೀವಿತದಲ್ಲಿ ಆಗುವ ಗಾಂಧಿಯು ವೃತ್ತಿ ಬಗ್ಗೆ ಮಾತ್ರ ಕೌಶಲ್ಯದ ಕಾರಣವಾಗಿ ವಂಶವೃತ್ತಿ ಹೇಳುತ್ತಿದ್ದುದನ್ನು ಕೊನೆಯವರೆಗೂ ಉಳಿಸಿಕೊಂಡರೇ ಹೇಗೆ ನನಗೆ ಗೊತ್ತಿಲ್ಲ. ಯಾವುದೇ ವೃತ್ತಿಯಾದರೂ ಜೀವನ ನಿರ್ವಹಣೆಗಾಗುವಷ್ಟು ಮಾತ್ರ ವೇತನ ಎಂಬ ಆಶಯ ಅವರಿಗಿದ್ದರೂ ಕೂಡ, ಈ ಅಭಿಪ್ರಾಯವನ್ನು   ಸಹಿಸಲು ಕಷ್ಟವಾಗುತ್ತದೆ. ಯಾಕೆಂದರೆ ವಂಶವೃತ್ತಿಯಲ್ಲಿ ಕೌಶಲ್ಯ ಹೆಚ್ಚಿದರೂ ಅದು  ಯಾಂತ್ರಿಕವಾಗಿ  ಕೊನೆಯಾಗುತ್ತದೆ.  ಆದರೆ  ವಂಶವೃತ್ತಿ ಬದಲಾವಣೆಯಲ್ಲಿ ಆ ವೃತ್ತಿಗೇನೆ ಸೃಜನಶೀಲತೆ ಉಂಟಾಗಿ ಹೊಸ ಸಾಧ್ಯತೆಗಳು ಹೆಚ್ಚುತ್ತವೆ. ಇದನ್ನು ಸದಾ ಚಲಿಸುವ ಗಾಂಧಿಗೆ ಮನದಟ್ಟು ಮಾಡಲು ನಾವು ಅವರೊಡನೆ ಒಂದು ಸಣ್ಣ ಜಗಳ ಮಾಡಬೇಕಾಗಿದೆ. ಅಥವಾ 1946ರಲ್ಲಿ ‘ವರ್ಗರಹಿತವಾದ ಜಾತಿರಹಿತವಾದ ಇಂಡಿಯಾ ನಿಮರ್ಿಸಲು ತಾನು ಪ್ರಯತ್ನಿಸುತ್ತಿರುವುದಾಗಿ ಗಾಂಧಿ ಹೇಳುತ್ತಾ ಭಾರತದಲ್ಲಿ ಒಂದೇ ಜಾತಿಯು ಉಳಿದಿರುವಂತಹ ಮತ್ತು ಬ್ರಾಹ್ಮಣರು ಹರಿಜನರನ್ನು ಸಹಜವಾಗಿ ಮದುವೆಯಾಗುವಂತಹ ಸಮಾಜಕ್ಕಾಗಿ ಗಾಂಧಿ ಹಂಬಲಿಸುತ್ತ ಒಂದು ನುಡಿ, ನುಡಿಯುತ್ತಾರೆ – ‘ಅಸಮಾನತೆಯಿಂದ ಹಿಂಸೆಯು ಹುಟ್ಟಿಕೊಳ್ಳುತ್ತದೆ. ಮತ್ತು ಸಮಾನತೆಯಿಂದ ಅಹಿಂಸೆಯು ಹುಟ್ಟಿಕೊಳ್ಳುತ್ತದೆ’ – ಎಂದು ಅಹಿಂಸೆ ಮತ್ತು ಸಮಾನತೆಯನ್ನು ಒಂದೇ ನಾಣ್ಯ ಮಾಡಿಬಿಡುತ್ತಾರೆ. ತನ್ನ ದರ್ಶನದ ಅಂತಿಮ ಸ್ಥಿತಿಯಲ್ಲಿ ‘ಣಚಿಣಜ ತಿಣಜಡಿ ಚಿತಿಚಿಥಿ’  ಎಂಬ ಮಹಾವಾಕ್ಯ  ನೀಡಿದ ಮಾಕ್ಸರ್್ನ ಕಾಣ್ಕೆಗೆ ಈ ನುಡಿ ಸಮಸಮವಾಗಿದೆ.
ಈ ಇಬ್ಬರು ತಲುಪಿದ ಸ್ಥಿತಿಯಲ್ಲಿ ಅವರನ್ನು ನೋಡಿದಾಗ ಅವರು ಇಂದು ಬದುಕಿದ್ದರೆ ಅವರು ಎಲ್ಲಿರುತ್ತಿದ್ದರು? ಹೇಗಿರುತ್ತಿದ್ದರು? ವೃದ್ಧಾಶ್ರಮವೊಂದಕ್ಕೆ ಎಸೆಯಲ್ಪಟ್ಟು ಒಂದೇ ಕಡೆ ವಾಸಿಸುತ್ತ ಅವರ ಗೊಣಗಾಟ ಇವರಿಗೆ ಮಾತ್ರ ಕೇಳಿಸುತ್ತಾ ಇವರ ಗೊಣಗಾಟ ಅವರಿಗೆ ಮಾತ್ರ ಕೇಳಿಸುತ್ತಾ  ತಮ್ಮ ಕಣ್ಮುಂದೆ ಜರುಗುತ್ತಿರುವುದನ್ನೆಲ್ಲ ಅಸಹಾಯಕರಾಗಿ, ತಲೆ ಮೇಲೆ ಕೈಯಿಟ್ಟು ಆಕಾಶ ನೋಡುತ್ತಿದ್ದರೆ? ಆಗಾಗ ಅವರಲ್ಲಿಗೆ ಹೋಗಿ ಚೇಷ್ಟೆ-ಕೀಟಲೆ ಮಾಡುವ ಡಿ.ಆರ್.ನಾಗರಾಜ್ ಎಂಬ ಬಚ್ಚಾ ಹೇಳಿದ ಒಂದು ಮಾತು-‘ಹಳ್ಳಿಯ ಜೀವಂತ ಸಂದರ್ಭದೊಳಗೆ ಅಂಬೇಡ್ಕರ್ವಾದಿಯಾಗಿ ಹಾಗೂ ಅದರ ಹೊರಗೆ ಗಾಂಧಿವಾದಿಯಾಗಿ ಕಂಡರೆ ಅದು ಅಧಿಕೃತವಾದದ್ದು’ ಎಂಬ ಆ ನುಡಿಯೊಳಗೆ ತಮಗೂ ತಿಳಿಯದಿದ್ದ ನಿಧಿ ಅಡಗಿದೆ ಎಂದು ಗಾಂಧಿ ಅಂಬೇಡ್ಕರ ಅವರಿಗೂ ಅನಿಸಿ  ಆ ನಿಧಿಯ ಗೆಜ್ಜೆಸದ್ದು ಆಲಿಸಿ ಎಂದು ಈ ಇಬ್ಬರೂ ಕೂಗಿ ಕೂಗಿ ಹೇಳಿಯೂ ಕೂಡ ಕೇಳಿಸಿಕೊಳ್ಳದ ಜನಸ್ತೋಮ ಕಂಡು ತಾವು ಸತ್ತವರ ನಡುವೆ ಬದುಕುತ್ತಿದ್ದೇವೇನೋ ಎಂದು  ಅನ್ನಿಸಿ ದಿಕ್ಕು ಕಾಣದೆ ಆ ಗಾಂಧಿ ಅಂಬೇಡ್ಕರ್  ಈರ್ವರೂ ತಮ್ಮ ಸಾವಿಗಾಗಿ ಪ್ರಾರ್ಥನೆ ಮಾಡುತ್ತಿರುವಂತೆ  – ಗೋಚರಿಸುತ್ತಾರೆ.
 ಈ ದೃಶ್ಯಾವಳಿ ನಮ್ಮ ಕಣ್ಮುಂದೆ ಬರಬಾರದು. ಅದಕ್ಕೆ ಬೇಕಾಗಿರುವುದು  ಇಷ್ಟು : ನಾವು ಈ ಇಬ್ಬರ ಸಮಕಾಲೀನರಾದರೆ ಜಗಳ ಅನಿವಾರ್ಯ, ಅಲ್ಲಿ-ಇಲ್ಲಿ ಸ್ವಲ್ಪ ಸಮೀಪಕ್ಕೆ ಬರಬಹುದು. ಆದರೆ ಇಡಿಯಾಗಿ ನೋಡಿದರೆ ಅವರಿಬ್ಬರ ನಡುವಿನ ಜಗಳವೂ ಸರಸ ಆಗಲೂಬಹುದು. ಅವರಲ್ಲಿ ಯಾರು ಗಂಡು ಯಾರು ಹೆಣ್ಣು ಎಂದು ನಿರ್ಧರಿಸಲು ಅವರವರ ಭಾವಕ್ಕೆ ಬಿಡುವೆ. ಯಾಕೆಂದರೆ ‘ಅಂಬೇಡ್ಕರ್ ತಾರತಮ್ಯಕ್ಕೆ ಒಳಗಾಗಿ ಮುನಿಸಿಕೊಂಡು ಹೊರಗೆ ಇರುವ ಮಗ’ ಎಂದು ನಾನು ಹೇಳಿದ್ದರಲ್ಲಿ, ಮಗ ಎಂದರೆ – ಹಕ್ಕಿರುವ ವಾರಸುದಾರ, ಠಣಣ ಛಿಚಿಣ ಆಗಿದ್ದಾನೆ ಎಂಬರ್ಥದಲ್ಲಿ ಗ್ರಹಿಸದೆ ಕೆಲವರು ಪದಪದಾರ್ಥ ಅರ್ಥಮಾಡಿಕೊಂಡುಬಿಟ್ಟರು! ಅದಕ್ಕಾಗಿ ಇದನ್ನು ಅವರವರ ಭಾವಕ್ಕೆ ಬಿಡುವೆ. ಆದರೆ ನಾವು ಗೋರಿ ಅಗೆದು ಈ ಇಬ್ಬರ ಮೂಳೆಗಳನ್ನು ಎಣಿಸುತ್ತಾ, ಪೂಜಿಸುತ್ತಾ, ತಕರ್ಿಸುತ್ತಾ ಮಡಿಮಾಡಿಕೊಂಡು ಭೇದ ಹುಡುಕುತ್ತಾ ಅವರು ಮಡಿಯುವಂತೆ ಮಾಡುತ್ತಿರುವುದನ್ನು ಕೈಬಿಡಬೇಕಾಗಿದೆ,   
ಈಗ ಈ ಇಬ್ಬರನ್ನೂ ನಾವು ಜೊತೆಗೂಡಿಸಿ ಒಳಗೊಂಡರೆ, ಅವರು ಬಡಿದಾಡುತ್ತಿದ್ದ ಕಾಲಮಾನದಲ್ಲಿ ಕಪ್ಪುಬಣ್ಣವು  ಕಪ್ಪು ಬಣ್ಣ ಮಾತ್ರವಾಗಿತ್ತು. ಬಿಳಿಯ ಬಣ್ಣವು ಬಿಳಿಯ ಬಣ್ಣ ಮಾತ್ರವಾಗಿತ್ತು. ಇಂದು ಕಪ್ಪು ಬಣ್ಣದೊಳಗೇನೆ ಸಾವಿರಾರು  ಬಣ್ಣಬಣಗಳಾಗಿಬಿಟ್ಟಿವೆ,    ಬಿಳಿಯ ಬಣ್ಣದೊಳಗೂ ಸಾವಿರಾರು ಬಣ್ಣ ಬಣಗಳಿವೆ. ಬಣ್ಣ ಬಣಗಳಿಗೆ ತಕ್ಕಂತೆ ಸುಲಿಗೆಗಳು ಥರಾವರಿಗಳಾಗಿ ಆ ಸಂಖ್ಯೆಯೂ ಹೆಚ್ಚುತ್ತಿವೆ. ಜೊತೆಗೆ ಸುಲಿಗೆ ಇಂದು ಸುಲಿಗೆಯಾಗಿ ಸುಲಿಯುತ್ತಿಲ್ಲ.   ರಕ್ಷಕನ ಮುಖವಾಡ ಹಾಕಿ ಸುಲಿಯುತ್ತಿದೆ. ಇದನ್ನು ಮಕ್ಕಳ ಮನರಂಜನಾ ಕಥೆಯಾಗಿಸಿ ಎಳೆಯ ಮಕ್ಕಳಲ್ಲೇ ಅಂದರೆ ಗಿಡವಾಗಿದ್ದಾಗಲೇ ಬಗ್ಗಿಸಿ ಸುಲಿಗೆಯನ್ನು ಒಪ್ಪಿತ ಮೌಲ್ಯವಾಗಿಸುವ ಹೊಸಹೊಸ ಬಲೆಗಳನ್ನು ಈ ಭೂಮಿ ಮೇಲೆ ನೇಯಲಾಗುತ್ತಿದೆ.  ಗೆಳೆಯ ರಾಜೇಂದ್ರ ಚೆನ್ನಿ, ತಮ್ಮ ದಂತಗೋಪುರ ಮತ್ತು ಮಾರುಕಟ್ಟೆ ರಾಜಕೀಯ ಲೇಖನದಲ್ಲಿ ಕಾಮಿಕ್ಸ್ಗಳಲ್ಲಿ ವಸಾಹತುಶಾಹಿ ಒಳಚರಿತ್ರೆಗಳಿವೆ ಎಂದು ಹೇಳುತ್ತಾ ‘ಆದಿವಾಸಿಗಳ ಮೇಲೆ ಹುಕುಂ ಮಾಡುವ  ಫ್ಯಾಂಟಮ್, ಆಫ್ರಿಕಾವನ್ನು ವಸಾಹತುವನ್ನಾಗಿ ಮಾಡಿದ ಬಿಳಿಯನ ಮೂಲಮಾದರಿ ಎನ್ನುವುದನ್ನೂ, ಹಾಗೇ ನಿಸರ್ಗ ಮತ್ತು ಪ್ರಾಣಿಗಳ ಮೇಲೆ ರಮ್ಯವಾದ ರೀತಿಯಲ್ಲಿ ಆಳ್ವಿಕೆ ಮಾಡುವ ಟಾರ್ಜನ್, ನಿಸರ್ಗದ ಮೇಲೆ ದಾಳಿ ಮಾಡಿ ಅದನ್ನು ಬಳಸಿಕೊಳ್ಳುವ ಯೂರೋಪಿಯನ್ ಮನುಷ್ಯನ ಸಂಕೇತವೆನ್ನುವುದನ್ನು ಮರೆಯುತ್ತೇವೆ’ ಎಂದು ಅಪೂರ್ವ ಒಳನೋಟ ನೀಡುತ್ತಾರೆ.  
ಹಾಗೇ ಚಿಂತಕ ಜೆರೆಮಿ ಸೀಬ್ರೂಕ್ ಬರೆಯುತ್ತಾ – ‘ಜಗತ್ತಿನ ಕಾಮರ್ಿಕರೆಲ್ಲರೂ ಒಟ್ಟಾಗಿ ಜಗತ್ತನ್ನು ದಾಸ್ಯದಿಂದ ವಿಮುಕ್ತಗೊಳಿಸಬಲ್ಲರು’ ಎಂಬ ಚಿಂತನೆ ದುರ್ಬಲಗೊಂಡಾಗ ಈಗ ‘ನಮಗೆ ಬೇಕಿರುವುದೆಲ್ಲವನ್ನೂ ಬಂಡವಾಳಶಾಹಿಯ ಮೂಲಕ ಮಾತ್ರ ಪಡೆದುಕೊಳ್ಳಲು ಸಾಧ್ಯ’ ಎಂಬ ಪುರಾಣ ಸೃಷ್ಟಿಸಲಾಗಿದೆ ಎನ್ನುತ್ತಾರೆ. ಇಂದು ಜೀವನ ಎಂದರೆ ಹಣದಿಂದ ಹಣಕ್ಕಾಗಿ ಹಣಕ್ಕೋಸ್ಕರ ಎಂಬಂತಾಗಿಬಿಟ್ಟಿದೆ. ಸಮಾನತೆ ಸಮತ್ವದ ಆಶಯಗಳು ಕಣ್ಣುಬಾಯಿ ಬಿಡುತ್ತಿವೆ. ಬಂಡವಾಳವೇ ಇಂದು ಜಗತ್ತಿನ ಹಸಿವಿನ ಬಗ್ಗೆ ಮಾತಾಡುತ್ತಿದೆ, ಉದ್ಯೋಗದ ಬಗ್ಗೆ ಮಾತಾಡುತ್ತಿದೆ, ಬಡವರ ಉದ್ಧಾರ ತನ್ನ ಕೈಲಿ ಮಾತ್ರ ಎಂಬಂತೆ ಬಿಂಬಿಸಿಕೊಂಡು ನಂಬಿಸುತ್ತಿದೆ. ಮಾಟಮಂತ್ರ ಮಾಯಾಬಜಾರ್ ಎಲ್ಲವೂ ವಿಜ್ಞಾನದ ಭಾಷೆಯಲ್ಲಿ ಮಾತಾಡುತ್ತಿದೆ.
ಹೀಗಿರುವಾಗ ವಿಮೋಚನೆ ಹೇಗೆ? ಅಥವಾ ಯಾರು? ಖಳನಾಯಕನು ನಾಯಕನನ್ನು ತುಳಿದಿಟ್ಟು ತಾನೇ ನಾಯಕನ ಮಾತುಗಳನ್ನಾಡುತ್ತಿದ್ದಾನೆ. ಜನ ಮರುಳಾಗುತ್ತಿದ್ದಾರೆ. ಜೊತೆಗೆ ಈ ಕಾಲ ಮಾಹಿತಿಯ ಯುಗ. ಮನುಷ್ಯ ಹೆಚ್ಚೆಚ್ಚು ಎಚ್ಚರವನ್ನೂ ಪಡೆಯುತ್ತಿದ್ದಾನೆ. ಎಚ್ಚರ ಇಲ್ಲದಿದ್ದಾಗ ಅಸಮಾನತೆ ತಾರತಮ್ಯಗಳು ಇದ್ದರೂ ಎಂತದೋ ಜಡ ನೆಮ್ಮದಿಯಾದರೂ ಇರುತ್ತಿತ್ತು. ಈಗ ಎಚ್ಚರದೊಡನೆ ತಾರತಮ್ಯ ಅಸಮಾನತೆಗಳು ಉಲ್ಬಣಗೊಂಡು ನೆಮ್ಮದಿಗೆಟ್ಟು ಭೂಮಿ ಬೇಯುತ್ತಿದೆ.
ಸಮಾನತೆ ಸಮತ್ವದ ಕನಸನ್ನು ಸಾಕ್ಷಾತ್ಕರಿಸಬೇಕಾದ ಸಂಘಟನೆಗಳು, ಪಕ್ಷಗಳೂ ಒಟ್ಟಾಗುತ್ತಿಲ್ಲ, ತಂತಮ್ಮ ಸೈದ್ಧಾಂತಿಕತೆಗೆ ಅನುಗುಣವಾಗಿ ತಮ್ಮವೇ ಪ್ರತ್ಯೇಕ ಶತ್ರುಗಳನ್ನು ಗುರುತಿಸಿಕೊಂಡು ಆ ಶತ್ರುಗಳಿಗೆ ತಕ್ಕಂತೆ ತಮ್ಮ ಪ್ರತ್ಯೇಕತೆ ಆಚರಿಸುತ್ತಿವೆ. ಮಡಿ ಮಾಡ್ತಾರಲ್ಲ ಹಾಗೆ.   ಕಾಲಾನುಕ್ರಮದಲ್ಲಿ ಜಡತೆ ಆವರಿಸಿಕೊಂಡಾಗ ಅವರು ಗುರುತಿಸಿಕೊಂಡಿದ್ದ ಶತ್ರು ಮರೆತು ಹೋಗಿ ಅವರ ಅಕ್ಕಪಕ್ಕದವರೇ ಶತ್ರುಗಳಾಗಿ ಬಿಡಬಹುದು. ಇದೂ ಆಗುತ್ತಿದೆ. ಹೀಗಿರುವಾಗ ತುಳಿತಕ್ಕೊಳಗಾದ ಜನತೆ ಒಟ್ಟಾಗುವುದೆಲ್ಲಿ ಬಂತು?  ಇದರೊಡನೆ ಖಾಸಗಿ ಬಂಡವಾಳದ ಕೃಪಾಪೋಷಿತ ಕೆಲವು ಎನ್.ಜಿ.ಓಗಳು ಜನಪರಶಕ್ತಿಗಳಿಗಿಂತಲೂ ಹೆಚ್ಚು ಜನಪರವಾಗಿ ಮಾತಾಡುತ್ತ ಜನಪರ ಆಂದೋಲನಗಳಿಗೆ ತೊಡರುಗಾಲು ಹಾಕುತ್ತಿವೆ. ಜೊತೆಗೆ ಸಮತ್ವ-ಸಮಾನತೆ ಆಶಯದ ದಲಿತ, ಮಹಿಳೆ, ಪರಿಸರ, ರೈತ ಮುಂತಾದ ಸಂಘಟನೆಗಳು, ಪಕ್ಷಗಳು ತಂತಮ್ಮ ಐಡೆಂಟಿಟಿ ರಾಜಕಾರಣವನ್ನೇ ಆನೆಕಾಲು ರೋಗದಂತೆ ದೊಡ್ಡದು ಮಾಡಿಕೊಂಡು ಸಮತ್ವ ಸಮಾನತೆಯನ್ನು ಮರೆತು ತೆವಳುತ್ತಿವೆ. ಇದುವರೆಗಿನ ಭೂಮಿ ಮೇಲಿನ ಶೋಷಣೆಯ ಇತಿಹಾಸದಲ್ಲಿ ಪ್ರಕೃತಿ ನಾಳೆಗೂ ಉಳಿಯುತ್ತಿತ್ತು. ಇಂದಿನ ಜಾಗತೀಕರಣ ಖಾಸಗೀಕರಣದ ದಾಹದಲ್ಲಿ ಪ್ರಕೃತಿ  ನಾಳೆಗೆ ಉಳಿಯುವುದಿಲ್ಲವೇನೋ ಎಂಬಷ್ಟು ವೇಗವಾಗಿ ಧ್ವಂಸೀಕರಣ ನಡೆಯುತ್ತಿದೆ.
ಈ ಧ್ವಂಸೀಕರಣ ಯುಗದಲ್ಲಿ ಗಾಂಧಿ ಒಬ್ಬ ಸಾಕೇ? ಅಂಬೇಡ್ಕರ್ ಒಬ್ಬ ಸಾಕೇ? ಅಥವಾ ಈ ಇಬ್ಬರೂ ಜತೆಗೂಡಿದರೆ ಅದಷ್ಟೇ ಸಾಕೇ? ಸಾಲದು ಅನಿಸುತ್ತದೆ. ಲೋಹಿಯಾ? ಸಾಲದು ಅನಿಸುತ್ತದೆ. ಮಹಷರ್ಿ ಮಾಕ್ಸರ್್ನನ್ನೂ ಜತೆಗೂಡಿಸಬೇಕಾಗಿದೆ. ಅಷ್ಟೂ ಸಾಲದು ಇನ್ನೂ. ತಮಗೆ ಬೇಕಾದ ಒಬ್ಬೊಬ್ಬರೇ ಸಾಕು ಎನ್ನುವವರು ಹೆಣದ ಮುಂದೆ ಎದೆ ಬಡಿದುಕೊಂಡು ಗೋಳಾಡುತ್ತಿರುವವರಂತೆ  ಕಾಣಿಸುತ್ತಾರೆ. ಒಂದು ಸಲ ನಾವು ಕೊಡವಿಕೊಂಡು ಪೊರೆ ಕಳಚಿ ಮರುಹುಟ್ಟು ಪಡೆಯಬೇಕಾಗಿದೆ. ನಮಗೆ ಬುದ್ಧ ವಚನಕಾರರ ಸ್ಪರ್ಶವೂ ಬೇಕಾಗಿದೆ.

-ದೇವನೂರ ಮಹಾದೇವ
 

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.