ಹಣದುಬ್ಬರ ಏನು, ಯಾಕೆ, ಹೇಗೆ?
ಹಣದುಬ್ಬರ ಮತ್ತೆ ಮತ್ತೆ ಚರ್ಚೆಯಾಗುತ್ತಿರುವ ವಿಷಯ. ಸಾಮಾನ್ಯವಾಗಿ ಬೆಲೆಗಳ ಹೆಚ್ಚಳವನ್ನು ಹಣದುಬ್ಬರ ಅಂತ ಕರೆಯಲಾಗುತ್ತದೆ. ಆದರೆ ಯಾವುದೋ ಕೆಲವು ಸರಕು ಹಾಗೂ ಸೇವೆಗಳ ಬೆಲೆ ಹೆಚ್ಚಿದಾಗ ಅದು ಹಣದುಬ್ಬರ ಅನಿಸಿಕೊಳ್ಳುವುದಿಲ್ಲ. ಒಟ್ಟಾರೆ ವಿಭಿನ್ನ ಕ್ಷೇತ್ರಗಳ ಸರಕು ಹಾಗೂ ಸೇವೆಗಳ ಬೆಲೆಗಳ ಹೆಚ್ಚಳವನ್ನು ಹಣದುಬ್ಬರ ಅಂತ ಕರೆಯುವುದು ವಾಡಿಕೆ. ಹಣದುಬ್ಬರದ ಹೊಡೆತ ಮೊದಲಿಗೆ ಬೀಳುವುದು ಜನಸಾಮಾನ್ಯರ ಮೇಲೆ. ಅದರಲ್ಲೂ ಬೆಲೆ ಹೆಚ್ಚಿದ ಪ್ರಮಾಣದಲ್ಲಿ ಅವರ ಆದಾಯ ಹೆಚ್ಚದೇ ಹೋದರೆ ಅವರ ಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ. ಆಗ ಅವರ ನೈಜ ವರಮಾನ ಅಥವಾ ಕೂಲಿ ಕಡಿಮೆಯಾಗಿದೆ ಅಂತ ಭಾವಿಸಲಾಗುತ್ತದೆ.
ಹಣದುಬ್ಬರಕ್ಕೆ ಕಾರಣವೇನು? ಅದನ್ನು ನಿಯಂತ್ರಿಸುವುದು ಹೇಗೆ ಅನ್ನುವುದರ ಬಗ್ಗೆ ಅರ್ಥಶಾಸ್ತ್ರಜ್ಞರಲ್ಲಿ ಒಮ್ಮತವಿಲ್ಲ. ಕೇಂದ್ರ ಬ್ಯಾಂಕುಗಳು ಹೊಯ್ದಾಟದಲ್ಲಿವೆ. ಆದರೆ ಕೇಂದ್ರ ಬ್ಯಾಂಕುಗಳ ಮುಖ್ಯಸ್ಥರು ’ಹಣದುಬ್ಬರದ ನಿಯಂತ್ರಣ ಸುಧೀರ್ಘ ಹೋರಾಟ’ ಅನ್ನುವುದನ್ನು ಒಪ್ಪಿಕೊಂಡಂತೆ ಕಾಣುತ್ತದೆ. ಅಮೇರಿಕೆಯ ಪೋವೆಲ್, ಐರೋಪ್ಯ ಕೇಂದ್ರ ಬ್ಯಾಂಕಿನ ಕ್ರಿಸ್ತಿನೆ, ಇಂಗ್ಲೆಂಡಿನ ಆಂಡ್ಯ್ರೂ ಬೈಲಿ ಎಲ್ಲರೂ ಬೇರೆ ಬೇರೆ ರೀತಿಯಲ್ಲಿ ಹೇಳಿದ್ದಾರೆ.
ಹಣದುಬ್ಬರಕ್ಕೆ ಯಾರು ಹೊಣೆ; ಅದಕ್ಕೆ ಕಾರಣವೇನು; ಅನ್ನುವ ವಿಷಯ ಚರ್ಚೆಗೆ ಬಂದಾಗ ಅರ್ಥಶಾಸ್ತ್ರಜ್ಞರು ಎರಡು ಗುಂಪುಗಳಾಗಿ ಬಿಡುತ್ತಾರೆ. ಈ ಜಗಳ ಇಂದು ನಿನ್ನೆಯದಲ್ಲ, ಶತಮಾನಗಳಷ್ಟು ಹಳೆಯದು. ನೀವು ಸಾಂಪ್ರದಾಯಿಕ ಹಣಕಾಸು ಅರ್ಥಶಾಸ್ತ್ರಜ್ಞರನ್ನು ಕೇಳಿದರೆ ಅವರು ಹಣದ ಪೂರೈಕೆಯ ಹೆಚ್ಚಳ ಇದಕ್ಕೆ ಕಾರಣ ಅನ್ನುತ್ತಾರೆ. ಅದಕ್ಕೆ ಅವರ ಪ್ರಖ್ಯಾತ ಹೇಳಿಕೆ ಅಂದರೆ ’ದೊಡ್ಡ ಮೊತ್ತದ ಹಣ ಕೆಲವೇ ಸರಕುಗಳ ಹಿಂದೆ ಬಿದ್ದಾಗ’ ಪದಾರ್ಥಗಳ ಬೆಲೆ ಹೆಚ್ಚುತ್ತದೆ ಅನ್ನುವುದು. ಸಾಲ ಅಗ್ಗವಾಗಿ ಸಿಕ್ಕರೆ, ಮಾರುಕಟ್ಟೆಯಲ್ಲಿ ಹಣದ ಪ್ರಮಾಣ ಅಂದರೆ ದ್ರವ್ಯತೆ ಹೆಚ್ಚುತ್ತದೆ. ಮಾರುಕಟ್ಟೆಯಲ್ಲಿ ದ್ರವ್ಯತೆ ಹೆಚ್ಚಾದರೆ ಹಣದುಬ್ಬರದ ದರ ಹೆಚ್ಚುತ್ತದೆ. ಹಾಗಾಗಿ ಹಣದುಬ್ಬರ ನಿಯಂತ್ರಿಸಬೇಕಾದರೆ ಆರ್ಥಿಕತೆಯಲ್ಲಿ ಚಲಾವಣೆಯಲ್ಲಿರುವ ಹಣದ ಪ್ರಮಾಣವನ್ನು ಕಡಿಮೆಮಾಡಬೇಕು. ಅದಕ್ಕೆ ಸಾಲದ ಪ್ರಮಾಣ ಕಡಿಮೆಯಾಗಬೇಕು. ಒಮ್ಮೆ ಮಾರುಕಟ್ಟೆಯಲ್ಲಿರುವ ದ್ರವ್ಯತೆ ಕಡಿಮೆಯಾದರೆ ಬೆಲೆ ಕಡಿಮೆಯಾಗುತ್ತದೆ. ಇದನ್ನು ಬಿಗಿ ಹಣಕಾಸಿನ ನೀತಿ ಅಂತ ಕರೆಯುತ್ತಾರೆ. ಇದು ಅವರ ಒಟ್ಟಾರೆ ವಾದ.
ಈ ಬಗ್ಗೆ ಹಲವು ಟೀಕೆಗಳಿವೆ. ಉದಾಹರಣೆಗೆ ಜಯತಿ ಘೋಷ್ ಅವರ ದೃಷ್ಟಿಯಲ್ಲಿ ಆರ್ಥಿಕತೆಯಲ್ಲಿನ ಒಟ್ಟಾರೆ ಹಣದ ಪ್ರಮಾಣ ಒಂದು ನಿರ್ದಿಷ್ಟ ಮೊತ್ತ ಅಥವಾ ಸ್ಟಾಕ್. ಆ ಪ್ರಮಾಣವನ್ನು ಆರ್ಥಿಕ ನೀತಿಗಳ ಮೂಲಕ ನಿರ್ಧರಿಸಬಹುದು. ಆದರೆ ವಾಸ್ತವದಲ್ಲಿ ಮೀಸಲಿರುವ ಹಣ ಹಾಗೂ ಬ್ಯಾಂಕುಗಳು ಕೊಡುವ ಸಾಲದ ಪ್ರಮಾಣವನ್ನಷ್ಟೇ ಸರ್ಕಾರ ನಿರ್ಧರಿಸಬಹುದು. ಆದರೆ ಇದೇ ಆರ್ಥಿಕತೆಯ ನಿಜವಾದ ದ್ರವ್ಯತೆಯ ಪ್ರಮಾಣವಲ್ಲ. ಚಲಾವಣೆಯ ವೇಗ ಬದಲಾದಂತೆ ಹಣದ ಪ್ರಮಾಣ ಬದಲಾಗುತ್ತಿರುತ್ತದೆ. ವಿಭಿನ್ನ ವ್ಯವಹಾರಗಳ ಮೂಲಕ ಹಣ ಕೈಬದಲಾಗುವ ದರವನ್ನು ಚಲಾವಣೆಯ ವೇಗ ಅನ್ನುತ್ತಾರೆ. ಚಲಾವಣೆಯ ವೇಗ ಜಾಸ್ತಿಯಾದರೆ ಹಣದ ಪ್ರಮಾಣ ಹೆಚ್ಚಾದಂತೆಯೇ. ಚಲಾವಣೆಯಾಗದೆ ಹಣ ಎಲ್ಲೋ ಉಳಿದುಬಿಟ್ಟಿದ್ದರೆ ಆ ಮಟ್ಟಿಗೆ ನಿಜವಾಗಿ ಹಣದ ಪ್ರಮಾಣ ಕಡಿಮೆಯಾದಂತೆ. ಆದ್ದರಿಂದ ಚಲಾವಣೆಯ ವೇಗ ಆರ್ಥಿಕತೆಯನ್ನು ಆಧರಿಸಿರುತ್ತದೆ. ಹಾಗಾಗಿ ಹಣ ಅಥವಾ ದ್ರವ್ಯತೆಯ ಪೂರೈಕೆ ಅಂತಿಮವಾಗಿ ಆರ್ಥಿಕತೆಯ ಚಟುವಟಿಕೆಯನ್ನು ಅವಲಂಬಿಸಿರುತ್ತದೆ. ಕೇಂದ್ರ ಬ್ಯಾಂಕ್ ಅಥವಾ ಸರ್ಕಾರದ ನೀತಿಯಿಂದ ಅದನ್ನು ಬದಲಿಸಲು ಸಾಧ್ಯವಿಲ್ಲ. ಕೇಂದ್ರ ಬ್ಯಾಂಕ್ ಬೇಕಾದರೆ ಮೂಲ ಬಡ್ಡಿದರವನ್ನು ನಿರ್ಧರಿಸಬಲ್ಲದು. ಇಂತಹ ಹಲವು ಟೀಕೆಗಳು ಸಾಧ್ಯ.
ಕೇನ್ಸ್‌ವಾದಿಗಳು ಹಾಗೂ ಸಾಂಸ್ಥಿಕ ದೃಷ್ಟಿಕೋನದ ಅರ್ಥಶಾಸ್ತ್ರಜ್ಞರು ಹಣದುಬ್ಬರವನ್ನು ಬೇರೆ ರೀತಿಯಲ್ಲೇ ಅರ್ಥಮಾಡಿಕೊಳ್ಳುತ್ತಾರೆ. ಕೇನ್ಸ್‌ವಾದಿಗಳ ಪ್ರಕಾರ ಒಟ್ಟಾರೆ ಆರ್ಥಿಕತೆಯಲ್ಲಿ ಆದಾಯಕ್ಕಿಂತ ವೆಚ್ಚ ಹೆಚ್ಚಾದರೆ ಬೆಲೆಗಳು ಹೆಚ್ಚುತ್ತದೆ. ಅಂದರೆ ಸರಕು ಹಾಗೂ ಸೇವೆಗಳಿಗೆ ಹೆಚ್ಚು ಬೇಡಿಕೆ ಇದ್ದು ಪೂರೈಕೆಯಲ್ಲಿ ಸಮಸ್ಯೆಯುಂಟಾದರೆ ಹಣದುಬ್ಬರ ಉಂಟಾಗುತ್ತದೆ.
ಸಾಂಸ್ಥಿಕ ಅರ್ಥಶಾಸ್ತ್ರಜ್ಞರು ಹಣದುಬ್ಬರವನ್ನು ಆರ್ಥಿಕತೆಯ ವಿಭಿನ್ನ ಗುಂಪುಗಳ ಘರ್ಷಣೆಯ ಫಲವಾಗಿ ನೋಡುತ್ತಾರೆ. ಅವರ ದೃಷ್ಟಿಯಲ್ಲಿ ಆರ್ಥಿಕತೆಯ ವಿಭಿನ್ನ ಗುಂಪುಗಳು ರಾಷ್ಟ್ರೀಯ ಉತ್ಪನ್ನದಲ್ಲಿ ತಮ್ಮ ಪಾಲಿಗಾಗಿ ಹೋರಾಡುತ್ತಿರುತ್ತಾರೆ. ಉದ್ದಿಮೆಗಳು, ಕಾರ್ಮಿಕರು, ಕೃಷಿಕರು ಹಾಗೂ ಇತರ ಉತ್ಪಾದಕರು, ಹಾಗೂ ಸರ್ಕಾರಗಳ ನಡುವಿನ ಈ ಹೋರಾಟ ಹಣದುಬ್ಬರಕ್ಕೆ ಕಾರಣ. ಉದಾಹರಣೆಗೆ ಆಮದಿನ ಬೆಲೆ ಹೆಚ್ಚಾದರೆ, ಉದ್ದಿಮೆಗಳು ತಮ್ಮ ಲಾಭದ ಪ್ರಮಾಣವನ್ನು ಉಳಿಸಿಕೊಳ್ಳಲು ಸರಕಿನ ಬೆಲೆಯನ್ನು ಹೆಚ್ಚಿಸಲು ಪ್ರಯತ್ನಿಸಬಹುದು. ಕಾರ್ಮಿಕರಿಗೆ ಇದರಿಂದ ತಮ್ಮ ನಿಜವಾದ ಕೂಲಿ ಕಡಿಮೆಯಾಗುತ್ತದೆ ಅನಿಸಿದರೆ ತಮ್ಮ ಕೂಲಿಯನ್ನು ಹೆಚ್ಚಿಸಲು ಹೋರಾಟಬಹುದು. ಅದು ಖರ್ಚನ್ನು ಮತ್ತಷ್ಟು ಹೆಚ್ಚಿಸುತ್ತದೆ. ಬೆಲೆ ಮತ್ತೆ ಏರುತ್ತದೆ. ಈ ಎರಡು ಗುಂಪುಗಳು ತಮ್ಮ ನೈಜ ವರಮಾನವನ್ನು ಉಳಿಸಿಕೊಳ್ಳಲು ನಡೆಸುವ ಹೋರಾಟದಲ್ಲಿ ಬೆಲೆ ಏರುತ್ತಾ ಹೋಗುತ್ತದೆ. ಅಂತಿಮವಾಗಿ ಇದು ವಿಭಿನ್ನ ಗುಂಪುಗಳ ಬಲವನ್ನು ಆಧರಿಸಿರುತ್ತದೆ. ಕಾರ್ಮಿಕರು ಅಸಂಘಟಿತರಾಗಿದ್ದರೆ ಅವರಿಗೆ ಹೋರಾಡುವ ಸಾಮರ್ಥ್ಯವಿರುವುದಿಲ್ಲ. ಕೂಲಿ ಹೆಚ್ಚುವ ಸಾಧ್ಯತೆಯಿರುವುದಿಲ್ಲ. ಬೆಲೆ ಏರಿದರೆ ಅವರ ನೈಜ ಕೂಲಿ ಕುಸಿಯುತ್ತದೆ. ಅವರ ಜೀವನ ಮಟ್ಟ ಇಳಿಯುತ್ತದೆ.
ಬೆಲೆಗಳು ಏಕೆ ಏರುತ್ತವೆ?
ಹಣದುಬ್ಬರವನ್ನು ಸಾಮಾನ್ಯವಾಗಿ ಎರಡು ರೀತಿಯಲ್ಲಿ ಅರ್ಥಮಾಡಿಕೊಳ್ಳಲಾಗುತ್ತಿದೆ. ಒಂದು ಬೇಡಿಕೆಯ ಹೆಚ್ಚಳದಿಂದ ಆಗುವ ಹಣದುಬ್ಬರ-ಡಿಮಾಂಡ್ ಪುಲ್ ಹಣದುಬ್ಬರ. ಅಂದರೆ ಪೂರೈಕೆಗಿಂತ ಬೇಡಿಕೆ ಹೆಚ್ಚಿದ್ದರೆ ಬೆಲೆಗಳು ಏರುತ್ತವೆ. ಇದು ಬೇಡಿಕೆಯ ಸೆಳೆತದಿಂದಾಗುವ ಹಣದುಬ್ಬರ. ಇದನ್ನು ಆರ್ಥಿಕತೆಯ ಓವರ್ ಹೀಟಿಂಗ್ ಅಂತಲೂ ಕರೆಯುವುದುಂಟು. ಮತ್ತೊಂದು ಕಾಸ್ಟ್ ಪುಷ್ ಅಥವಾ ವೆಚ್ಚದೊತ್ತಡದ ಹಣದುಬ್ಬರ. ಕೆಲವು ನಿರ್ದಿಷ್ಟ ಪದಾರ್ಥಗಳ ಬೆಲೆ ಹೆಚ್ಚುವುದರಿಂದ ಉತ್ಪಾದನಾ ಖರ್ಚು ಹೆಚ್ಚುತ್ತದೆ. ಪೂರೈಕೆಯ ಸಮಸ್ಯೆಯಿಂದ ಕೆಲವು ವಸ್ತುಗಳ ಬೆಲೆ ಹೆಚ್ಚಿದರೆ ಅಥವಾ ಆಮದು ದುಬಾರಿಯಾದರೆ ಆಗ ಉತ್ಪಾದನಾ ಖರ್ಚು ಹೆಚ್ಚುತ್ತದೆ. ಆಗ ಸ್ವಾಭಾವಿವಾಗಿಯೇ ಸರಕು ಹಾಗೂ ಸೇವೆಗಳ ಬೆಲೆ ಹೆಚ್ಚುತ್ತದೆ. ಇದು ವೆಚ್ಚದೊತ್ತಡದಿಂದ ಆಗುವ ಹಣದುಬ್ಬರ. ಹಣದುಬ್ಬರ ಯಾವ ಬಗೆಯದು ಅನ್ನುವುದನ್ನು ಆಧರಿಸಿ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ.
ಹಣದುಬ್ಬರಕ್ಕೆ ಬೇಡಿಕೆಯ ಹೆಚ್ಚಳ ಕಾರಣವಾಗಿದ್ದರೆ ಸರ್ಕಾರ ಬಡ್ಡಿದರವನ್ನು ಹೆಚ್ಚಿಸುತ್ತದೆ. ಅದರಿಂದ ಸಾಲ ದುಬಾರಿಯಾಗುತ್ತದೆ. ಆರ್ಥಿಕತೆಯಲ್ಲಿ ಹಣದ ಪ್ರಮಾಣ ಕಡಿಮೆಯಾಗುತ್ತದೆ. ಅದು ಆರ್ಥಿಕ ಚಟುವಟಿಕೆಯನ್ನು ಕುಗ್ಗಿಸುತ್ತದೆ. ಆ ಮೂಲಕ ಆರ್ಥಿಕತೆಯಲ್ಲಿ ಹಣದ ಪ್ರಮಾಣ ಕಡಿಮೆಯಾಗುತ್ತದೆ. ಬೇಡಿಕೆ ಕಮ್ಮಿಯಾಗುತ್ತದೆ. ಅಂತಿಮವಾಗಿ ಹಣದುಬ್ಬರ ನಿಯಂತ್ರಣಕ್ಕೆ ಬರುತ್ತದೆ. ಇದು ಒಂದು ಕ್ರಮ.
ಆದರೆ ವೆಚ್ಚದ ಹೆಚ್ಚಳದಿಂದ ಹಣದುಬ್ಬರ ಹೆಚ್ಚಿದ್ದರೆ ಬಡ್ಡಿಯ ದರವನ್ನು ಏರಿಸುವುದರಿಂದ ಲಾಭವಿಲ್ಲ. ಬದಲಿಗೆ ಇಂತಹ ಬಿಗಿ ಹಣಕಾಸು ನೀತಿಯಿಂದ ಆರ್ಥಿಕ ಚಟುವಟಿಕೆಗಳು ಕುಗ್ಗುವುದರ ಜೊತೆಗೆ ಬೆಲೆಗಳ ಏರಿಕೆಯೂ ಮುಂದುವರಿಯಬಹುದು. ಅಂದರೆ ಹಣದುಬ್ಬರದ ಜೊತೆಗೆ ಆರ್ಥಿಕ ಸ್ಥಗಿತತೆಯೂ ಸೇರಿಕೊಂಡ ಸ್ಥಿತಿ ನಿರ್ಮಾಣವಾಗಬಹುದು. ಇದನ್ನು ಸ್ಟಾಗ್‌ಫ್ಲೇಷನ್ ಅಥವಾ ಸ್ಥಗಿತದುಬ್ಬರ ಎಂದು ಕರೆಯುತ್ತಾರೆ.
ಇಂದಿನ ಹಣದುಬ್ಬರಕ್ಕೆ ಕಾರಣವೇನು?
ಬಹುತೇಕ ಕೇಂದ್ರ ಬ್ಯಾಂಕುಗಳು ಬೇಡಿಕೆಯ ಹೆಚ್ಚಳವನ್ನು ಇಂದಿನ ಹಣದುಬ್ಬರಕ್ಕೆ ಕಾರಣವೆಂದು ಒಪ್ಪಿಕೊಂಡಂತೆ ಕಾಣುತ್ತಿದೆ. ಎಲ್ಲಾ ಬ್ಯಾಂಕುಗಳು ಬಡ್ಡಿಯ ದರವನ್ನು ಹೆಚ್ಚಿಸುತ್ತಾ ಸಾಗಿವೆ. ಒಂದು ದೇಶ ಬಡ್ಡಿದರವನ್ನು ಹೆಚ್ಚಿಸಿದರೆ ಮತ್ತೊಂದು ದೇಶಕ್ಕೆ ಬಡ್ಡಿದರ ಹೆಚ್ಚಿಸುವುದು ಅನಿವಾರ್ಯವಾಗುತ್ತದೆ. ಇಲ್ಲದೇ ಹೋದರೆ ಅಲ್ಲಿಂದ ಬಂಡವಾಳವೂ ಹೆಚ್ಚಿನ ಬಡ್ಡಿ ಸಿಗುವ ಕಡೆಗೆ ಹರಿಯತೊಡಗುತ್ತದೆ. ಆ ಆತಂಕದಿಂದಲೇ ಒಂದೆಡೆ ಬಡ್ಡಿದರ ಹೆಚ್ಚಿದ ಕೂಡಲೇ ಉಳಿದ ಕೇಂದ್ರ ಬ್ಯಾಂಕುಗಳೂ ಬಡ್ಡಿದರವನ್ನು ಹೆಚ್ಚಿಸುತ್ತಾ ಹೋಗುತ್ತವೆ.
ಸಾಮಾನ್ಯವಾಗಿ ಇತ್ತೀಚಿನ ಹಣದುಬ್ಬರವನ್ನು ೨೦೨೨ರಿಂದ ಗುರುತಿಸುತ್ತಾರೆ. ಆದರೆ ೨೦೨೧ರ ಮಧ್ಯ ಭಾಗದಲ್ಲೇ ಆಹಾರ ಧಾನ್ಯಗಳು, ಇಂಧನ ಇವುಗಳ ಬೆಲೆ ಜಾಗತಿಕವಾಗಿ ಹೆಚ್ಚಲು ಪ್ರಾರಂಭವಾಗಿತ್ತು. ಕೋವಿಡ್ ಹಾಗೂ ಯುಕ್ರೇನ್ ಯುದ್ದದಿಂದ ಇದು ಹೆಚ್ಚು ತೀವ್ರವಾಯಿತು. ಆಗ ಇಂಧನ, ಎಣ್ಣೆ, ಗೋಧಿ ಗೊಬ್ಬರ ಇತ್ಯಾದಿ ಪದಾರ್ಥಗಳ ಪೂರೈಕೆಯ ಸಮಸ್ಯೆಯಿಂದ ಉಳಿದ ಸರಕು ಹಾಗೂ ಸೇವೆಗಳ ಬೆಲೆ ಇನ್ನಷ್ಟು ಹೆಚ್ಚಿತು. ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು.
ಆದರೆ ಪೂರೈಕೆಯ ಸಮಸ್ಯೆಯಿಂದ ಆದಂತಹ ಬೆಲೆ ಏರಿಕೆಯೇ ಹಣದುಬ್ಬರಕ್ಕೆ ಸಂಪೂರ್ಣ ಕಾರಣವಲ್ಲ. ಉದಾಹರಣೆಗೆ ಸರಕುಗಳ ವಾಯಿದಾ ಮಾರುಕಟ್ಟೆಯಲ್ಲಿನ ಹಣಕಾಸಿನ ಸಟ್ಟಾ ವ್ಯವಹಾರ ಕೂಡ ಬೆಲೆಗಳನ್ನು ಗಣನೀಯವಾಗಿ ಏರಿಸಿದೆ. ವಾಯಿದಾ ವ್ಯಾಪಾರ ಅನ್ನುವುದು, ಮೊದಲೇ ಗೊತ್ತು ಮಾಡಿದ ಬೆಲೆಗೆ ಮುಂದಿನ ನಿರ್ದಿಷ್ಟದ ದಿನಾಂಕದಂದು ವಸ್ತುಗಳನ್ನು ಮಾರಾಟ ಮಾಡುವುದಕ್ಕೆ ಹಾಗು ಕೊಳ್ಳುವುದಕ್ಕೆ ಮಾಡಿಕೊಂಡ ಒಪ್ಪಂದ. ಇಲ್ಲಿಯ ಹೂಡಿಕೆದಾರರಿಗೆ ಸರಕುಗಳನ್ನು ಕೊಳ್ಳುವುದರಲ್ಲಿ ಆಸಕ್ತಿ ಇಲ್ಲ. ಲಾಭವಷ್ಟೇ ಮುಖ್ಯ. ಆಹಾರದ ವಾಯಿದಾ ವ್ಯವಹಾರದಲ್ಲಿ ಹಣ ಹೂಡುವುದು ಹೆಚ್ಚು ಲಾಭದಾಯಕವಾಗಿ ಕಂಡರೆ ಅಲ್ಲಿ ಹಣ ಹೂಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸರಕು ವಾಯಿದಾ ವ್ಯವಹಾರ ಹೆಚ್ಚಿದೆ. ಅದರಿಂದ ಗೋಧಿ ಹಾಗೂ ಇತರ ಸರಕುಗಳ ಬೆಲೆ ವಾಯಿದಾ ಮಾರುಕಟ್ಟೆಯಲ್ಲಿ ಬೆಲೆಯಲ್ಲಿ ವಿಪರೀತ ಏರಿಕೆಯಾಗಿರುವುದನ್ನು ಹಲವರು ಗಮನಿಸಿದ್ದಾರೆ. ಸಮಸ್ಯೆ ಅಂದರೆ ಈ ಬೆಲೆ ಏರಿಕೆ ಕೇವಲ ವಾಯಿದಾ ಮಾರುಕಟ್ಟೆಗೆ ಮಾತ್ರ ಸೀಮಿತವಾಗುವುದಿಲ್ಲ. ಸರಕುಗಳ ಮಾರುಕಟ್ಟೆಯಲ್ಲೂ ಬೆಲೆ ಏರುತ್ತದೆ. ಇಂತಹ ಸಟ್ಟಾ ವ್ಯಾಪಾರ ಆಹಾರದ ಬಿಕ್ಕಟ್ಟನ್ನು ಸೃಷ್ಟಿಸಲ್ಲದು ಎಂಬುದನ್ನು ೨೦೦೭-೦೮ರಲ್ಲಿ ನೋಡಿದ್ದೇವೆ. ಅದರಿಂದ ಲಕ್ಷಾಂತರ ಜನರ ಬದುಕು ದುರ್ಭರವಾಗಿದ್ದನ್ನು ಕಂಡಿದ್ದೇವೆ.
ಬೆಲೆ ಏರಿಕೆಗೆ ಮತ್ತೊಂದು ಬಹು ಮುಖ್ಯ ಕಾರಣ ಕಾರ್ಪೋರೇಟ್ ಕ್ಷೇತ್ರದ ಲಾಭಕೋರತನ. ಈ ಬೆಳವಣಿಗೆಯನ್ನು ಅಮೇರಿಕೆಯಲ್ಲಿ ಸ್ಪಷ್ಟವಾಗಿ ನೋಡಬಹುದು. ೧೯೭೯ರಿಂದ ೨೦೧೯ರ ವರೆಗೆ ಹಣದುಬ್ಬರ ಅಷ್ಟಾಗಿ ಸಮಸ್ಯೆಯಾಗಿರಲಿಲ್ಲ. ಬೆಲೆಗಳು ನಿಯಂತ್ರಣದಲ್ಲೇ ಇದ್ದವು. ಒಟ್ಟಾರೆ ಬೆಲೆಯನ್ನು ಕೂಲಿಯ, ಕೂಲಿಯೇತರ ಖರ್ಚು ಹಾಗೂ ಲಾಭ ಎಂದು ಮೂರು ಭಾಗವಾಗಿ ವಿಂಗಡಿಸಿದರೆ, ಆಗ ಬೆಲೆ ಏರಿಕೆಯಲ್ಲಿ ಕೂಲಿಯ ಪ್ರಮಾಣ ೬೨%ರಷ್ಟಿತ್ತು. ಉತ್ಪಾದನೆಯಲ್ಲಿ ಬಳಸುವ ಇತರ ಪದಾರ್ಥಗಳ ಬೆಲೆ ೨೭%, ಹಾಗೂ ಕಾರ್ಪೋರೇಟ್ ಉದ್ದಿಮೆಗಳ ಲಾಭ ೧೧% ರಷ್ಟಿತ್ತು. ಬಿವೆನ್ಸ್ ಗುರುತಿಸುವಂತೆ ಈಗ ಪರಿಸ್ಥಿತಿ ಬದಲಾಗಿದೆ. ೨೦೨೦ರ ಎರಡನೇ ತ್ರೈಮಾಸಿಕದಿಂದ ೨೦೨೧ರ ಕೊನೆಯ ತ್ರೈಮಾಸಿಕದವರೆಗಿನ ಆವಧಿಯಲ್ಲಿ ಹಣದುಬ್ಬರದ ದರದಲ್ಲಿ ಕಾರ್ಪೋರೇಟ್ ಲಾಭದ ಪಾಲು ೫೪% ಆಗಿದೆ. ಕೂಲಿಯ ಪಾಲು ೮%ಗಿಂತ ಕಡಿಮೆಯಾಗಿದೆ. ಇನ್ನೂ ಕೂಲಿಯೇತರ ಖರ್ಚು ೩೮% ಆಗಿದೆ. ಅಂದರೆ ಪೂರೈಕೆಯ ಸಮಸ್ಯೆಗಳಿಂದ ಆದ ಖರ್ಚು ಅಂತ ನಾವು ಯಾವುದನ್ನು ವರ್ಣಿಸುತ್ತಿದ್ದೇವೋ ಅದರಲ್ಲಿ ವ್ಯತ್ಯಾಸವಾಗಿರುವುದು ಕೇವಲ ೧೧%. ಲಾಭದ ಪಾಲು ೪೩% ಹೆಚ್ಚಾಗಿದೆ. ಎಕನಾಮಿಕ್ ಪಾಲಿಸಿ ಇನ್ಸಿಟಿಟ್ಯೂಟ್ ಅಧ್ಯಯನವನ್ನು ಗಮನಿಸಿದರೆ ಇತ್ತೀಚಿನ ಬೆಲೆ ಏರಿಕೆಯಲ್ಲಿ ಕಾರ್ಮಿಕರಿಗೇನೂ ಲಾಭವಾಗಿಲ್ಲ. ೨೦೨೨ರ ಮಧ್ಯಭಾಗದಲ್ಲಿ ಕೂಲಿಯ ನೈಜ ಮೌಲ್ಯ ಕಳೆದ ೬೬ ವರ್ಷಗಳಲ್ಲೇ ಕಡಿಮೆ ಇದೆ.
ಹಣದುಬ್ಬರಕ್ಕೆ ಕಾರ್ಪೋರೇಟ್ ಲಾಭಕೋರತನ ಬಹುಮಟ್ಟಿಗೆ ಕಾರಣ ಅಂತ ಇತ್ತೀಚಿಗೆ ಹಲವು ಕೇಂದ್ರ ಬ್ಯಾಂಕುಗಳು ಕೂಡ ಹೇಳತೊಡಗಿವೆ. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಕೂಡ ತನ್ನ ಟ್ವೀಟ್‌ನಲ್ಲಿ ಕಳೆದ ಎರಡು ವರ್ಷಗಳಲ್ಲಿ ಯುರೋಪಿನ ಹಣದುಬ್ಬರಕ್ಕೆ ಹೆಚ್ಚುತ್ತಿರುವ ಕಾರ್ಪೋರೇಟ್ ಲಾಭ ಮುಖ್ಯ ಕಾರಣ. ಅವು ಇಂಧನದ ಆಮದು ಬೆಲೆಯ ಹೆಚ್ಚಳಕ್ಕಿಂತ ತಮ್ಮ ಉತ್ಪನ್ನಗಳ ಬೆಲೆಯನ್ನು ಹಲವು ಪಟ್ಟು ಹೆಚ್ಚಿಸಿವೆ. ಎಂದು ಹೇಳಿವೆ. ಯುರೋಪಿನ ಕೇಂದ್ರ ಬ್ಯಾಂಕಿನ ಅಧ್ಯಕ್ಷೆ ಲಗಾರ್ಡೆ ಕೂಡ ಹಲವು ಕಾರ್ಪೋರೇಟ್ ಉದ್ದಿಮೆಗಳು ಕೆಲವು ಕ್ಷೇತ್ರಗಳು ಖರ್ಚಿನ ಹೆಚ್ಚಳದ ಹೆಸರಿನಲ್ಲಿ ಬೆಲೆಗಳನ್ನು ವಿಪರೀತ ಹೆಚ್ಚಿಸಿವೆ ಎಂದು ಹೇಳಿದ್ದಾರೆ. ಐಎಂಎಫ್‌ನ ಮೂರು ಅರ್ಥಶಾಸ್ತ್ರಜ್ಞರು ತಮ್ಮ ಅಧ್ಯಯನದಲ್ಲಿ ಹಣದುಬ್ಬರದ ಏರಿಕೆಗೆ ೪೫%ರಷ್ಟು ಕಾರ್ಪೋರೇಟ್ ಲಾಭ ಕಾರಣ ಅಂತ ತಿಳಿಸಿದ್ದಾರೆ.
ಹಣದುಬ್ಬರಕ್ಕೆ ಕೂಲಿಯ ದರದಲ್ಲಿ ಏರಿಕೆ ಕಾರಣ ಅನ್ನುವ ವಾದವೂ ಇದೆ. ಅಮೇರಿಕೆಯಲ್ಲಿ ಕೂಲಿ ೪-೪.೫%ರಷ್ಟು ಏರುತ್ತಿದೆ. ಯುರೂಪಿನಲ್ಲಿ ಅದು ೫.೫%ರಷ್ಟು ಏರುತ್ತಿದೆ. ಹಾಗಾಗಿ ಕಾರ್ಮಿಕರ ಪೂರೈಕೆ ಹಾಗೂ ಬೇಡಿಕೆಯ ನಡುವೆ ಸಮತೋಲನ ಸಾಧ್ಯವಾಗದೇ ಹೋದರೆ ಹಣದುಬ್ಬರ ನಿಯಂತ್ರಣಕ್ಕೆ ಬರುವುದಕ್ಕೆ ಸಾಧ್ಯವಿಲ್ಲ ಅನ್ನುವುದು ಅವರ ವಾದ. ಅದಕ್ಕಾಗಿ ನಿರುದ್ಯೋಗದ ದರ ಹೆಚ್ಚಾಗಬೇಕು. ಈಗ ನಿರುದ್ಯೋಗದ ಪ್ರಮಾಣ ಕೇವಲ ೩.೭% ಇದೆ. ಉದ್ದೇಶಿತ ಹಣದುಬ್ಬರದ ದರ ಸಾಧಿಸಬೇಕಾದರೆ ಅದು ಕನಿಷ್ಠ ೪.೩% ಆಗಬೇಕು ಎಂದು ಅವರು ಹೇಳುತ್ತಿದ್ದಾರೆ. ಹಾಗಾಗಿ ಹಣದುಬ್ಬರ ನಿಯಂತ್ರಣಕ್ಕೆ ಬರಬೇಕಾದರೆ ಒಂದಿಷ್ಟು ಜನ ಕೆಲಸ ಕಳೆದುಕೊಳ್ಳಬೇಕಾದದ್ದು ಅನಿವಾರ್ಯ. ಅಂದರೆ ಸಂಕಷ್ಟವಿಲ್ಲದೆ ಹಣದುಬ್ಬರವನ್ನು ನಿಯಂತ್ರಿಸುವುದಕ್ಕೆ ಸಾಧ್ಯವಿಲ್ಲ ಎನ್ನುವುದು ಅವರ ನಿಲುವು. ಆದರೆ ಅಮೇರಿಕೆಯೂ ಸೇರಿದಂತೆ ಜಾಗತಿಕವಾಗಿ ನೈಜ ಕೂಲಿ ಹಲವು ವರ್ಷಗಳಿಂದ ಕುಸಿಯುತ್ತಲೇ ಇದೆ. ಹಣದುಬ್ಬರದಲ್ಲಿ ಕೂಲಿಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಇಳಿಯುತ್ತಿರುವುದನ್ನು ಈಗಾಗಲೇ ಗಮನಿಸಿದ್ದೇವೆ.
ಕೋವಿಡ್ ಸಮಯದಲ್ಲಿ ಸರ್ಕಾರಗಳು ನೀಡಿದ ವಿತ್ತೀಯ ಉತ್ತೇಜನವನ್ನು ಕಾರಣವಾಗಿ ಹಲವರು ಮುಂದಿಟ್ಟಿದ್ದಾರೆ. ಅಮೇರಿಕೆ ತನ್ನ ಜಿಡಿಪಿಯ ೨೬%ನ್ನು ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಆದಂತಹ ಆರ್ಥಿಕ ಕುಸಿತದ ಪುನಚ್ಛೇತನಕ್ಕಾಗಿ ವಿತ್ತೀಯ ಉತ್ತೇಜನವಾಗಿ ನೀಡಿತ್ತು. ಯುರೋಪಿನಲ್ಲಿ ಅದು ೮-೧೫%ರಷ್ಟಿತ್ತು. ಅದೇ ಅಮೇರಿಕೆಯಲ್ಲಿ ಹಣದುಬ್ಬರಕ್ಕೆ ೮೦% ಕಾರಣ ಅನ್ನುವ ಮಟ್ಟಕ್ಕೆ ಹೋಗುತ್ತಾರೆ. ಆದರೆ ಅಧ್ಯಯನಗಳು ಇದಕ್ಕೆ ವ್ಯತಿರಿಕ್ತವಾದ ಸತ್ಯವನ್ನು ಹೇಳುತ್ತವೆ.
ಐಎಂಎಫ್ ಡೆಪ್ಯುಟಿ ಮಾನೇಜಿಂಗ್ ಡೈರಕ್ಟರ್ ಗೀತಾ ಗೋಪಿನಾಥ್ ಹೇಳಿರುವಂತೆ ಹಣದುಬ್ಬರ ಕಡಿಮೆಯಾಗಬೇಕಾದರೆ, ಉದ್ದಿಮೆಗಳು ತಮ್ಮ ಲಾಭಾಂಶವನ್ನು ಇಳಿಸಿಕೊಳ್ಳಲು ಸಿದ್ಧರಿರಬೇಕು ಇದು ಸಾಧ್ಯವಾಗಬೇಕಾದರೆ ವಿಪರೀತ ಲಾಭದ ಹಿಂದೆ ಓಡುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು. ಹೂಡಿಕೆಯನ್ನು ಪ್ರೋತ್ಸಾಹಿಸಬೇಕು, ಉತ್ಪಾದಕತ್ವವನ್ನು ಹೆಚ್ಚಿಸಬೇಕು. ಹಳೆಯ ರೀತಿಯಲ್ಲಿ ಹೆಚ್ಚು ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಬೇಕು.
ಬೇಡಿಕೆ ಹೆಚ್ಚಿರುವುದರಿಂದಲೇ ಲಾಭಾಂಶವನ್ನು ಹೆಚ್ಚಿಸುವುದಕ್ಕೆ ಸಾಧ್ಯವಾಗಿದೆ ಎಂದು ವಾದಿಸುವುದಕ್ಕೆ ಸಾಧ್ಯವಿದೆ. ಇದು ಸ್ವಲ್ಪ ಮಟ್ಟಿಗೆ ನಿಜ ಕೂಡ. ಆದರೆ ಕೈಗಾರಿಕೆಗಳಿಗಿರುವ ಏಕಸ್ವಾಮ್ಯತೆಯಿಂದಾಗಿ ಹಾಗೂ ಅವುಗಳು ಹೆಚ್ಚೆಚ್ಚು ಕೇಂದ್ರಿಕರಣಗೊಳ್ಳುತ್ತಿರುವುದರಿಂದ ಅವುಗಳಿಗೆ ಬೆಲೆ ಏರಿಸುವ ಅಗಾಧ ಶಕ್ತಿ ಸಿಕ್ಕಿದೆ. ಯುಕ್ರೇನ್ ಯುದ್ದ ಅವುಗಳಿಗೆ ಇಂಧನ, ಆಹಾರ ಹಾಗೂ ಔಷಧಿಗಳ ಕ್ಷೇತ್ರದಲ್ಲಿ ಬೆಲೆಗಳನ್ನು ಎರ್ರಾಬಿರ್ರಿ ಹೆಚ್ಚಿಸುವುದಕ್ಕೆ ಸೊಗಸಾದ ಅವಕಾಶವನ್ನು ಮಾಡಿಕೊಟ್ಟಿತು. ೧೯೫೦ರಿಂದ ಆ ಪ್ರಮಾಣದಲ್ಲಿ ಬೆಲೆಯೇರಿಕೆ ಆಗಿರಲೇ ಇಲ್ಲ ಅಂತ ಕೆಲವು ಅಧ್ಯಯನಗಳು ಹೇಳಿವೆ. ಮಾರುಕಟ್ಟೆಯ ಮೇಲೆ ಅವುಗಳಿಗಿದ್ದ ಹಿಡಿತ ಹಣದುಬ್ಬರಕ್ಕೆ ಪ್ರಧಾನ ಕಾರಣ ಅನ್ನುವುದನ್ನು ಅಲ್ಲಗೆಳೆಯಲಾಗುವುದಿಲ್ಲ. ಹಾಗಾಗಿ ಹಣದುಬ್ಬರಕ್ಕೆ ಪರಿಹಾರ ಯೋಚಿಸಬೇಕಾದರೆ ಈ ಏಕಸ್ವಾಮ್ಯವನ್ನು ನಿಯಂತ್ರಿಸುವುದನ್ನು ಕುರಿತು ಯೋಚಿಸಬೇಕು.
ನೀವು ಈಗಾಗಲೇ ಗಮನಿಸಿರುವಂತೆ ಸಟ್ಟಾ ವ್ಯಾಪಾರ ಆಹಾರ ಪದಾರ್ಥಗಳ ಬೆಲೆಯನ್ನು ಗಣನೀಯವಾಗಿ ಏರಿಸಿದೆ. ಸಟ್ಟಾವ್ಯಾಪಾರ ಆರ್ಥಿಕತೆಯಲ್ಲಿ ದೊಡ್ಡ ಗೊಂದಲವನ್ನು ಸೃಷ್ಟಿಸಬಲ್ಲದು. ೨೦೨೨ರಲ್ಲಿ ನಿಕಲ್ ಬೆಲೆ ವಿಪರೀತ ಏರಿದ್ದನ್ನು ಗಮನಿಸಿದವರಿಗೆ ಇದರ ಅರಿವಿರುತ್ತದೆ. ನಿಕಲ್ ಬೆಲೆಗಳು ಯಾವ ಮಟ್ಟಿಗೆ ಏರಿತ್ತು ಅಂದರೆ ಲಂಡನ್ ಮೆಟಲ್ ವಿನಿಮಯ ವ್ಯಾಪಾರವನ್ನು ನಿಲ್ಲಿಸಿ ಎಲ್ಲಾ ವ್ಯವಹಾರಗಳನ್ನು ರದ್ದುಗೊಳಿಸಿತ್ತು. ಹಾಗಾಗಿ ಹಣದುಬ್ಬರವನ್ನು ನಿಯಂತ್ರಿಸಲು ತೆಗೆದುಕೊಳ್ಳುವ ಕ್ರಮ ವಾಯಿದಾ ಮಾರುಕಟ್ಟೆಯ ಸಟ್ಟಾ ವ್ಯವಹಾರವನ್ನು ನಿಯಂತ್ರಿಸುವ ನಿಟ್ಟಿನಲ್ಲೂ ಯೋಚಿಸಬೇಕು.
೨೦೦೮ರ ಜಾಗತಿಕ ಹಣಕಾಸು ಬಿಕ್ಕಟ್ಟಿನ ನಂತರ ಅಮೇರಿಕೆ ಹಾಗೂ ಯುರೋಪ್ ಸರಕು ವಾಯಿದಾ ವ್ಯವಹಾರವನ್ನು ನಿಯಂತ್ರಿಸುವುದಕ್ಕೆ ಒಂದಿಷ್ಟು ಕ್ರಮಗಳನ್ನು ತೆಗೆದುಕೊಂಡಿತ್ತು. ಆದರೂ ಸಟ್ಟಾ ವ್ಯಾಪಾರ ಮುಂದುವರಿದೇ ಇದೆ. ಅವು ಇನ್ನೂ ಜನರ ಬದುಕು ಹಾಗೂ ಜೀವನದ ಮೇಲೆ ಆಟ ಆಡುವುದು ನಿಂತಿಲ್ಲ. ಹಾಗಾಗಿ ಅದನ್ನು ನಿಯಂತ್ರಿಸಲು ಹಲವು ಕ್ರಮಗಳು ಅನಿವಾರ್ಯ. ಸರಕನ್ನು ವ್ಯಾಪಾರ ಮಾಡುವವರು ಹಾಗೂ ಅವುಗಳನ್ನು ಬಳಸುವವರಿಗೆ ಮಾತ್ರ ವಿನಿಮಯದಲ್ಲಿ ಅವಕಾಶ ಇರಬೇಕು. ಉದಾಹರಣೆಗೆ ವಿಮಾನದ ಇಂಧನದ ವಾಯಿದಾ ವ್ಯವಹಾರಕ್ಕೆ ಏರಲೈನ್ ಕಂಪೆನಿಗೆ ಮಾತ್ರ ಅವಕಾಶ ಇರಬೇಕು. ಯಾರು ವ್ಯವಹಾರದಲ್ಲಿ ತೊಡಗಿದ್ದಾರೆ ಹಾಗೂ ವ್ಯವಹಾರದ ವಿವರಗಳು ಪಾರದರ್ಶಕವಾಗಿರಬೇಕು. ಜೊತೆಗೆ ಮಾರುಕಟ್ಟೆಯಲ್ಲಿ ಪಾಲ್ಗೊಳ್ಳುವವರು ಸರಕನ್ನು ಕೊಳ್ಳುವ ಪ್ರಮಾಣ ಅವರ ನಿಜವಾದ ಬಳಕೆ, ಅವಶ್ಯಕತೆ ಹಾಗು ಆ ಸರಕಿನ ಉತ್ಪಾದನೆಯನ್ನು ಆಧರಿಸಿರಬೇಕು.
ಹಾಗಾಗಿ ಜಾಗತಿಕ ಮಟ್ಟದಲ್ಲಿ ಯೋಚಿಸುವುದಾದರೆ ಬಡ್ಡಿಯ ದರವನ್ನು ಏರಿಸುವಂತಹ ಕ್ರಮಗಳಿಂದ ಬಿಕ್ಕಟ್ಟಿನಲ್ಲಿರುವ ದೇಶಗಳ ಸ್ಥಿತಿ ಸುಧಾರಿಸುವುದಿಲ್ಲ. ಅದು ಹಣದುಬ್ಬರಕ್ಕೂ ಪರಿಹಾರವಾಗುವುದಿಲ್ಲ. ಆರ್ಥಿಕ ಚಟುವಟಿಕೆಗಳು ಇನ್ನಷ್ಟು ಕುಸಿಯುತ್ತದೆ. ಆರ್ಥಿಕತೆ ಹಿಂಸರಿಯುತ್ತದೆ. ಸಧ್ಯಕ್ಕಿರುವ ಪರಿಹಾರ ಅಂದರೆ ಕಾರ್ಪೋರೇಟುಗಳ ಏಕಸ್ವಾಮ್ಯ ಶಕ್ತಿ ಹಾಗೂ ಹಣಕಾಸು ಸಟ್ಟಾ ವ್ಯವಹಾರವನ್ನು ನಿಯಂತ್ರಿಸುವ ಕಡೆ ಗಮನಕೊಡಬೇಕು. ಹೆಚ್ಚಿನ ಲಾಭದ ಮೇಲೆ ತೆರಿಗೆ ಹಾಕಬೇಕು. ಅದರಿಂದ ಲಾಭಕೋರತನಕ್ಕೆ ಕಡಿವಾಣ ಬೀಳಬಹುದು. ಜೊತೆಗೆ ನಿರ್ದಿಷ್ಟ ಸರಕುಗಳ ಬೆಲೆ ನಿಯಂತ್ರಿಸುವ ನಿಟ್ಟಿನಲ್ಲೂ ಯೋಚಿಸಬೇಕು.
ಹಿಂದುಳಿದ ದೇಶಗಳು ಹಣದುಬ್ಬರವನ್ನು ನಿಯಂತ್ರಿಸುವುದಕ್ಕೆ ಮುಂದುವರಿದ ದೇಶಗಳನ್ನು ಸುಮ್ಮನೆ ಅನುಕರಣೆ ಮಾಡದೆ ತಮ್ಮ ನಿರ್ದಿಷ್ಟ ಅವಶ್ಯಕತೆಗೆ ಹಾಗೂ ಆರ್ಥಿಕತೆಗೆ ಸೂಕ್ತವಾಗುವ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪ್ರಮುಖ ಸರಕುಗಳ ಬೆಲೆಯನ್ನು ನಿಯಂತ್ರಿಸುವ, ಪೂರೈಕೆಯ ಕೊರತೆಯನ್ನು ನೀಗಿಸುವ ಉದ್ದೇಶದಿಂದ ದೇಶಿಯ ಉತ್ಪಾದನೆಯನ್ನು ಹೆಚ್ಚಿಸುವ, ಹಾಗೂ ನಿರುದ್ಯೋಗಿಗಳಿಗೆ ಸಾಮಾಜಿಕ ರಕ್ಷಣೆಯನ್ನು ನೀಡುವ ಹಾಗೂ ಅತಿಯಾದ ಹಣದುಬ್ಬರದಿಂದ ತೊಂದರೆಗೊಳಗಾದ ಜನರಿಗೆ ಅನುಕೂಲವಾಗು ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಇಂತಹ ಅಲ್ಪಕಾಲೀನ ಕ್ರಮಗಳ ಜೊತೆಗೆ ಬಂಡವಾಳದ ನಿಯಂತ್ರಣಕ್ಕೆ ಬೇಕಾದ ಕ್ರಮಗಳನ್ನು ಅನುಸರಿಸಬೇಕು. ಒಳಹರಿವು ಹಾಗೂ ಹೊರಹರಿವಿನ ಮೇಲೆ ನಿಯಂತ್ರಣ ಇರಬೇಕು. ಅಂದರೆ ಜನರ ಬದುಕಿಗೆ ಘಾಸಿಯಾಗದಂತೆ, ನಿರುದ್ಯೋಗವನ್ನು ಕುಗ್ಗಿಸುವ, ಹಣದುಬ್ಬರವನ್ನು ನಿಯಂತ್ರಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕು. ವಿಫಲವಾಗಿರುವ ಹಣಕಾಸು ನೀತಿಗಳಿಗೆ ಜೋತು ಬೀಳುವುದರಲ್ಲಿ ಅರ್ಥವಿಲ್ಲ.
ನಿಜ, ಈಗ ಹಲವು ದೇಶಗಳಲ್ಲಿ ಹಣದುಬ್ಬರ ಕಮ್ಮಿಯಾಗುತ್ತಿದೆ. ಆದರೆ ಅದಕ್ಕೆ ಬಿಗಿಯಾದ ಹಣಕಾಸು ನೀತಿಯೇ ಕಾರಣವಲ್ಲದಿರಬಹುದು. ಜೋಸೆಫ್ ಸ್ಟಿಗ್ಲಿಟ್ಜ್ ಹೇಳುತ್ತಾರೆ :
“ಹಣದುಬ್ಬರ ನಿಯಂತ್ರಣಕ್ಕೆ ಕೇಂದ್ರ ಬ್ಯಾಂಕ್ ನಿರ್ಧಾರ ಕಾರಣ ಅಂತ ಕೆಲವರು ಹೇಳುತ್ತಿದ್ದಾರೆ. ನನ್ನ ನಾಯಿ ವೂಫಿ ಕೂಡ ಇಂತದ್ದೇ ತೀರ್ಮಾನಕ್ಕೆ ಬರಬಹುದು. ಏರೋಪ್ಲೇನ್ ನಮ್ಮ ಮನೆಯ ಮೇಲೆ ಹೋದಾಗೆಲ್ಲಾ ಅದು ಬಗುಳುತ್ತಿರುತ್ತದೆ. ತಾನು ಬಗಳಿದ್ದರಿಂದಲೇ ಏರೋಪ್ಲೇನ್ ಹೆದರಿ ಆಚೆಗೆ ಹೋಯಿತು. ಇಲ್ಲದೇ ಹೋಗಿದ್ದರೆ ತನ್ನ ಮೇಲೆ ಬೀಳುತ್ತಿತ್ತು ಅಂತ ಅದು ನಂಬಿಕೊಳ್ಳಬಹುದು.”
(ಈ ಟಿಪ್ಪಣೆಗೆ ಜಯತಿ ಘೋಷ್, ಪ್ರಭಾತ್ ಪಟ್ನಾಯಕ್, ಜೋಸೆಫ್ ಸ್ಟಿಗ್ಲಿಟ್ಜ್ ಅವರ ಲೇಖನಗಳನ್ನು ಧಾರಾಳವಾಗಿ ಬಳಸಿಕೊಳ್ಳಲಾಗಿದೆ.)