ಹಸ್ತದಲ್ಲೇ ಮೂಜಗ ತೋರಿದ ಬಾಲಾ

 In RAGAMALA


೧೯೬೧ರ ಒಂದು ದಿನ ಉಡುಪಿಯಲ್ಲಿನ ನೀಲಾಕಾಶ ಕೃಷ್ಣನ ವ್ಯಕ್ತಿತ್ವದ ಪ್ರತಿಭೆಯನ್ನೇ ಪ್ರತಿಫಲಿಸುತ್ತಿದೆಯೇನೋ ಎನ್ನುವಂತೆ ಭಾಸವಾಗುತ್ತಿತ್ತು. ಗರ್ಭಗುಡಿಯಲ್ಲಿನ ತೈಲದ ದೀಪಗಳ ಸೌಮ್ಯವಾದ ಬೆಳಕಿನಲ್ಲಿ ನಸುನಗುತ್ತಿರುವ ಕೃಷ್ಣನ ಮನಮೋಹಕ ವಿಗ್ರಹ ಮೋಹಿನಿಯಂತೆ ಭಕ್ತರ ಮನಸೆಳೆಯುತ್ತಿತ್ತು. ಅತ್ಯಂತ ಮಧುರವಾದ ದನಿಯಲ್ಲಿ ಹೊರಹೊಮ್ಮುತ್ತಿದ್ದ ವ್ಯಾಸರಾಯರ ರಚನೆ ಕೃಷ್ಣ ನೀ ಬೇಗನೆ ಬಾರೋ ಅಲ್ಲಿ ನೆರೆದಿದ್ದ ಊರಿನ ಮತ್ತು ಪರವೂರಿನ ಭಕ್ತಾದಿಗಳ ಕಿವಿ ತುಂಬತೊಡಗಿದಾಗ, ಎಲ್ಲರ ಚಿತ್ತವೂ ಹರಿದದ್ದು ಗರ್ಭಗುಡಿಯೆದುರಿನ ಹಜಾರದಲ್ಲಿ ಹಾಡಿಕೊಂಡು ನರ್ತಿಸುತ್ತಿದ್ದ ನರ್ತಕಿಯತ್ತ. ಆಕೆ ನೋಡಲೇನು ಮೋಹಿನಿಯಂತಿರಲಿಲ್ಲ. ನಲ್ವತ್ತರ ಹರೆಯದ ಹೆಣ್ಣುಮಗಳು. ಸ್ವಲ ದಢೂತಿ ಎನ್ನಬಹುದಾದ, ಎತ್ತರ, ಗಾತ್ರದ ಮೈಮಾಟ. ಪಚ್ಚೆಯ ಅಂಚು ಸೆರಗಿದ್ದ ಮುತ್ತಿನ ಬಣ್ಣದ ಸೀರೆಯನ್ನು ಉಟ್ಟಿದ್ದರು. ಅದೇನು ಪೂರ್ವ ನಿರ್ಧಾರಿತವಾದ ಕಾರ್ಯಕ್ರಮವಾಗಿರಲಿಲ್ಲ. ಅಲ್ಲಿ, ಆ ಕ್ಷಣದಲ್ಲಿ ಉಂಟಾದ ತುಡಿತದಿಂದಾಗಿ ಕೃಷ್ಣನಮನ ಸಲ್ಲಿಸ ಹೊರಟಿದ್ದ ಆ ಮಹಿಳೆ ತನ್ನ ಅಸಾಧಾರಣ ಅಭಿನಯದಿಂದ ಆ ಕೃತಿಯನ್ನು ನೃತ್ಯಲೋಕದಲ್ಲಿ ಅಮರಗೊಳಿಸಿದರು. ಹಾಡುವಿಕೆ ಅತಿ ಸೊಗಸಾಗಿತ್ತು. ನೃತ್ಯವಂತೂ ನೋಡುಗರ ಕಲ್ಪನೆ ಗರಿಗೆದರುವಂತೆ ಮಾಡುತ್ತಿತ್ತು. ತನ್ನ ಮುದ್ದು ಕೃಷ್ಣನನ್ನು ಬಾರೆನ್ನುತ್ತಿರುವ ತಾಯಿ ಯಶೋದೆಯನ್ನು ನರ್ತಕಿ ಚಿತ್ರಿಸುತ್ತಿದ್ದಳು. ಹಾಡಿಕೊಂಡು ನರ್ತಿಸುತ್ತಿದ್ದ ಆ ಮಹಿಳೆಯೇ ಶ್ರೇಷ್ಠ ಅಭಿನೇತ್ರಿ ಎನಿಸಿಕೊಂಡಿದ್ದ ನೃತ್ಯಲೋಕದ ಮಾಟಗಾತಿ ಟಿ. ಬಾಲಸರಸ್ವತಿ. ಅವರು ಕೃಷ್ಣನನ್ನು ಕರೆಯುತ್ತಿದ್ದ ವಿಭಿನ್ನ ರೀತಿಗಳು ಭಕ್ತರನ್ನು ದಿಗ್ಭ್ರಾಂತಗೊಳಿಸಿತ್ತು. ಅವರೆಲ್ಲರೂ ಮೋಡಿಗೊಳಗಾದವರಂತೆ, ಬಾಲಕೃಷ್ಣ ಅವರ ಕರೆಗೆ ಓಗೊಡುತ್ತಿದ್ದಾನೆಯೇ ಎನ್ನುವುದನ್ನು ನೋಡುವ ಕುತೂಹಲದಿಂದ ಅಪ್ರಜ್ಞಾಪೂರ್ವಕವಾಗಿ ಗರ್ಭಗುಡಿಯತ್ತ ಸಾಗುತ್ತಿದ್ದರು. ಬಾಲಸರಸ್ವತಿಯ ಕರೆಯನ್ನು ತಿರಸ್ಕರಿಸಲು ಯಾರಿಗಾದರೂ ಸಾಧ್ಯವೇ ಎಂದು ಯೋಚಿಸುತ್ತಾ ನಡೆಯುತ್ತಿದ್ದರು. ಕಾಶೀಪೀತಾಂಬರ ಎಂಬ ಸಾಲನ್ನು ಅವರು ಹಾಡಿ ನರ್ತಿಸುತ್ತಿದ್ದರೆ ಎಲ್ಲರ ಮನದ ಕಣ್ಣಲ್ಲಿ ಸೊಗಸಾದ ಪೀತಾಂಬರವುಟ್ಟು, ವಜ್ರಖಚಿತ ಕೊಳಲನ್ನು ಕೈಯಲ್ಲಿ ಹಿಡಿದು, ವೈಜಯಂತಿ ಹಾರ ತೊಟ್ಟು, ಶ್ರೀಗಂಧದ ಪರಿಮಳಸೂಸುವ ಶ್ರೀಕೃಷ್ಣನ ಮೂರುತಿ ಮೂಡಲಾರಂಭಿಸಿತು. ಜಗದೋದ್ಧಾರಕ ನಮ್ಮ ಉಡುಪಿ ಶ್ರೀಕೃಷ್ಣ ಎಂದು ತಾಯಿ ಯಶೋದ ಕೃಷ್ಣನನ್ನು ಕರೆಯುತ್ತಿದ್ದಾಳೆ ಮತ್ತು ಮಗು ಅವಳ ಸಮೀಪಕ್ಕೆ ಬರುತ್ತದೆ. ಮಣ್ಣು ತಿಂದದ್ದೇಕೆಂದು ಅವಳು ಮಗುವನ್ನು ಗದರಿಸಿ, ಬಾಯಿ ತೆರೆಯುವಂತೆ ಜೋರುಮಾಡುತ್ತಾಳೆ. ಆಗ ನಗುತ್ತಾ ಬಾಲಕೃಷ್ಣ ಬಾಯಿ ತೆರೆಯುತ್ತಾನೆ. ಅಬ್ಬಾ! ಅಲ್ಲಿ ನೆರೆದಿರುವ ಭಕ್ತರು ಮತ್ತು ಬಾಲಸರಸ್ವತಿ ಆ ಬಾಯಲ್ಲಿ ಕಂಡದ್ದು ಮಣ್ಣನ್ನಲ್ಲ, ಮೂಜಗವನ್ನು. ಒಂದು ಕ್ಷಣ ಯಶೋದೆಯಾಗುವ, ಮರುಕ್ಷಣ ಕೃಷ್ಣನಾಗುವ ಬಾಲಸರಸ್ವತಿ, ನೀಲವರ್ಣದ ಕೃಷ್ಣ ವಿಶ್ವವೇ ತಾನಾಗಿ, ಮತ್ತೆ ಮರುಕ್ಷಣ ಮುದ್ದು ಮಗುವಾಗಿ ಬದಲಾಗುವ ಅದ್ಭುತ ಪ್ರಕ್ರಿಯೆಯನ್ನು ತನ್ನ ಸೃಜನಶೀಲ ಮನೋಧರ್ಮದಿಂದ ತೋರಿ ಪ್ರೇಕ್ಷಕರನ್ನು ಮತ್ತಷ್ಟು ಮೋಡಿಗೊಳಿದಳು. ಆ ಪ್ರೇಕ್ಷಕರ ನಡುವೆ ಒಬ್ಬ ಮಾತ್ರ ಇದ್ಯಾವ ಮೋಡಿಗೂ ಒಳಗಾಗದೆ, ದೇವಾಲಯದ ಪ್ರಾಂಗಣದೊಳಗೆ ನರ್ತಿಸುವ ಧೈರ್ಯ ತೋರಿದವರಾರೆಂದು ಸಿಟ್ಟಿನಿಂದ ಆಕ್ಷೇಪಿಸುತ್ತಾ, ಇಂತಹ ನೃತ್ಯಗಳನ್ನು ಕಾನೂನು ನಿಷೇಧಿಸಿದೆ ಎಂದು ಬಂದರು. ದೇವರ ರಾಜ್ಯವಾದ ಕೃಷ್ಣನ ಆಲಯದಲ್ಲಿ ಬೇರೆ ಚಕ್ರಾಧಿಪತಿಯ ಆಳ್ವಿಕೆಗೆ ಎಡೆಯಾದರೂ ಎಲ್ಲಿ? ಅವರನ್ನು ಸದ್ದಿಲ್ಲದೆ ಹೊರಗೆ ಕರೆದೊಯ್ದು ಕೂಗಾಡಲು ಬಿಟ್ಟು ಮತ್ತೆ ನೃತ್ಯ ನೋಡಲು ಮರಳಿದರು ಜನ.
ಈ ಅಸಾಧಾರಣ ದಿವ್ಯ ಪ್ರತಿಭೆ ಬಾಲ ಸರಸ್ವತಿ. ನೀವು ಶ್ರೇಷ್ಠತೆಯ ಸನ್ನಿಧಿಯಲ್ಲಿದ್ದೀರಿ ಎನ್ನುವ ಭಾವವನ್ನು ಮೂಡಿಸುವ ಅಪ್ರತಿಮ ಕಲಾವಿದೆ. ತಂಜಾವೂರು ಬಾಲ ಸರಸ್ವತಿ, ಪೂರ್ವ ಪಶ್ಚಿಮಗಳೆರಡರ ನೃತ್ಯರಸಿಕರಲ್ಲಿ ಇನ್ನೊಬ್ಬ ಇಂತಹ ಕಲಾವಿದೆ ಬರುತ್ತಾಳೆಯೇ ಎನ್ನುವ ಪ್ರಶ್ನೆಯನ್ನೂ, ತುಂಬಲಾರದ ಖಾಲಿತನವನ್ನೂ ಉಳಿಸಿಹೋದವರು.
ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲಿ ಭಾರತೀಯ ಸಂಗೀತ-ನೃತ್ಯ ಕ್ಷೇತ್ರ ಮತ್ತು ಅದನ್ನು ಶ್ರೀಮಂತಗೊಳಿಸಿದ ದೇವದಾಸಿ ಸಮುದಾಯದ ಬದುಕು ಬಗೆಬಗೆಯ ತಲ್ಲಣಗಳು, ತವಕಗಳು, ಬವಣೆ ಬದಲಾವಣೆಗಳ ಸುಳಿಯಲ್ಲಿ ಸಿಲುಕಿದ್ದಾಗ, ಈ ತಳಮಳದ ಒಡಲಿನಿಂದಲೇ ಮೂಡಿದ ಅಪ್ಪಟ, ಸೃಜನಶೀಲ, ಶ್ರೇಷ್ಠ ಕಲಾವಿದೆ ಟಿ. ಬಾಲ ಸರಸ್ವತಿ. ಪಶ್ಚಿಮದ ವಸಾಹತು ಸಂಸ್ಕೃತಿಯ ಅಳತೆಗೋಲುಗಳು ಬಹುಸಂಸ್ಕೃತೀಯ ಭಾರತೀಯ ಸಮಾಜದ ’ಶುದ್ಧೀಕರಣಕ್ಕೆ ಕೈಹಾಕಿದ ಸಂದರ್ಭದಲ್ಲಿ, ಅದರ ವಿರುದ್ಧ ಅತ್ಯಂತ ಗಟ್ಟಿಯಾಗಿ ನಿಂತವರು. ದೇಸೀವಾದ ಅಥವಾ ವಸಾಹತುವಿರೋಧಿ ಸಿದ್ಧಾಂತ ಮುಂತಾದವುಗಳ ಪರಿಚಯವೇ ಇಲ್ಲದ ಬಾಲಾ ತನ್ನ ಪರಂಪರೆ ಮತ್ತು ಅದು ರೂಪಿಸಿ ಬೆಳೆಸಿ ಕಾಪಿಟ್ಟುಕೊಂಡು ಬಂದಿದ್ದ ಶಾಸ್ತ್ರೀಯ ನೃತ್ಯದಲ್ಲಿ ಶುದ್ಧೀಕರಿಸಬೇಕಾದ್ದು ಏನೂ ಇಲ್ಲ ಎಂದು ಗಾಢವಾಗಿ ನಂಬಿದ್ದರು. ಆ ನಂಬಿಕೆ ಮತ್ತು ಶ್ರದ್ಧೆಗಳಿಂದಲೇ ನರ್ತಿಸಿದರು. ಅವರನ್ನು ಮತ್ತು ಅವರ ಕಲೆಯನ್ನು ಶ್ರೇಷ್ಠ ಮತ್ತು ಕಾಲಾತೀತವೆನಿಸುವಂತೆ ಮಾಡಿದ್ದು ಈ ಶ್ರದ್ಧೆ ನಂಬಿಕೆಗಳೇ.
ದೇವದಾಸಿ ಸಮುದಾಯವೆನ್ನುವುದು ಒಂದು ಜಾತಿಯಾಗಿರಲಿಲ್ಲ, ಬದಲಾಗಿ ಅದೊಂದು ಬದುಕಿನ ಕ್ರಮವಾಗಿತ್ತು. ಮಾತೃಪ್ರಧಾನ ವ್ಯವಸ್ಥೆಯಿದ್ದ ದೇವದಾಸಿ ಸಮುದಾಯದಲ್ಲಿ ಮಹಿಳೆಯರು ತಮ್ಮ ಸಂಗಾತಿಗಳನ್ನು ಆಯ್ಕೆಮಾಡಿಕೊಳ್ಳುತ್ತಿದ್ದರು. ಅವರೊಡನೆ ಭಾವನಾತ್ಮಕ ಸಂಬಂಧವನ್ನು ಹೊಂದಿರುತ್ತಿದ್ದರು. ಈ ಸಂಬಂಧಗಳಿಗೆ ಕುಟುಂಬದ ಹಿರಿಯರು, ಸಮಾಜ ಮತ್ತು ಧರ್ಮದ ಸಮ್ಮತಿಯಿತ್ತು. ದೇವದಾಸಿ ಕುಟುಂಬ ವ್ಯವಸ್ಥೆಯಲ್ಲಿ ಮನೆಯ ಆರ್ಥಿಕ ನಿರ್ವಹಣೆ ಮತ್ತು ಸುಸ್ಥಿತಿಗೆ ಹೆಂಗಸರೇ ಹೊಣೆಗಾರರು. ಸಾಮಾನ್ಯವಾಗಿ ದೇವದಾಸಿ ಹೆಣ್ಣುಮಕ್ಕಳು ತೌರಿನಿಂದ ಬೇರೆ ಹೋಗುತ್ತಿರಲಿಲ್ಲ. ಬದಲಾಗಿ ಅದರ ಭಾಗವಾಗಿಯೇ ಮುಂದುವರೆಯುತ್ತಿದ್ದರು. ಸ್ತ್ರೀವಾದದ ಪರಿಚಯವಿಲ್ಲದಿದ್ದ ಕಾಲದಲ್ಲಿಯೂ ಇವರೆಲ್ಲರೂ ತುಂಬಾ ಸ್ವಾಭಿಮಾನಿಗಳಾಗಿ, ಸ್ವಾವಲಂಬಿಗಳಾಗಿ ಬದುಕಿದ್ದರು. ಬಾಲಸರಸ್ವತಿ ಬದುಕಿದ್ದು ಕೂಡ ಹೀಗೆಯೇ. ಬಾಲ ಸರಸ್ವತಿಯ ಬಾಳ ಸಂಗಾತಿ ೧೯೪೭ರ ನೆಹರೂ ಸಚಿವ ಸಂಪುಟದಲ್ಲಿ ಮೊಟ್ಟ ಮೊದಲ ವಿತ್ತಮಂತ್ರಿಯಾಗಿದ್ದ ಆರ್ ಕೆ ಷಣ್ಮುಗಂ. ಆದರೆ ಬಾಲಾ ಎಂದೂ ತನ್ನ ಬದುಕಿನ ಆರ್ಥಿಕತೆಯ ಹೆಚ್ಚಳಕ್ಕೆ ಅವರನ್ನು ಬಳಸಿಕೊಳ್ಳಲಿಲ್ಲ. ಬಾಲಾಳ ಕಾಲಕ್ಕೆ ಉಂಟಾದ ಸಾಮಾಜಿಕ ಸ್ಥಿತ್ಯಂತರದಿಂದಾಗಿ ಹೆಚ್ಚೆಚ್ಚು ಸಾಂಪ್ರದಾಯಿಕ ಕಲಾವಂತ ಕುಟುಂಬಗಳು ಹೊಸ ಸಾಮಾಜಿಕ ವ್ಯವಸ್ಥೆಯೊಳಗೆ ಸೇರಿಕೊಳ್ಳಲಾರಂಭಿಸಿದವು. ಆದರೆ ತನ್ನ ಹಿಂದಿನ ಸಾಮಾಜಿಕ ವ್ಯವಸ್ಥೆಗೆ ಮತ್ತು ತನ್ನ ಕುಟುಂಬದ ಸಾಂಸ್ಕೃತಿಕ ಜೀವನಕ್ರಮಕ್ಕೆ ಅನುಗುಣವಾಗಿಯೇ ಸಾರ್ವಜನಿಕವಾಗಿ ಬದುಕುತ್ತೇನೆಂಬ ಬಾಲಾಳ ಆಯ್ಕೆ ತುಂಬಾ ಅಸಾಧಾರಣವಾದ ದಿಟ್ಟತನದ ಕ್ರಮ.
ಬಾಲ ಸರಸ್ವತಿಯ ಕುಟುಂಬ ಕರ್ನಾಟಕ ಸಂಗೀತಲೋಕದ ಒಂದು ಅಪರೂಪದ ಕುಟುಂಬ. ಆರು ತಲೆಮಾರುಗಳಿಂದ ನಿರಂತರ ಸಂಗೀತನೃತ್ಯದಲ್ಲಿ ತೊಡಗಿಸಿಕೊಂಡಿದ್ದ ಹಾಗೂ ಕರ್ನಾಟಕ ಸಂಗೀತದ ತ್ರಿಮೂರ್ತಿಗಳಿಂದ ಸಂಗೀತವನ್ನು ನೇರವಾಗಿ ಕಲಿತಿದ್ದ ಕುಟುಂಬ ಅದು. ಆ ಕುಟುಂಬದ ಅತಿ ಶ್ರೇಷ್ಠ ಕಲಾವಿದೆ ವೀಣಾ ಧನಮ್ಮಾಳ್. ಅವರು ಕರ್ನಾಟಕ ಸಂಗೀತಲೋಕದ ಅನಭಿಷಿಕ್ತ ಸಾಮ್ರಾಜ್ಞಿ. ಕರ್ನಾಟಕ ಸಂಗೀತದ ಅತಿಹೆಚ್ಚು ಸಂಗೀತ ಕಲಾನಿಧಿ ಪ್ರಶಸ್ತಿಗಳನ್ನು ಪಡೆದ ಕುಟುಂಬ ಅವರದು. ಬಾಲಾ ಧನಮ್ಮಾಳ್ ಅವರ ಮೊಮ್ಮಗಳು. ಬಾಲಾ ಹುಟ್ಟಿದ್ದು ೧೯೧೮ರ ಮೇ ಹದಿಮೂರರಂದು ಮದ್ರಾಸಿನ ಕ್ರಿಶ್ಚಿಯನ್ ರೈಲಿ ಆಸ್ಪತ್ರೆಯಲ್ಲಿ. ಬಾಲಾಳ ತಾಯಿ ಟಿ ಜಯಮ್ಮಾಳ್, ತಂದೆ ಮೊದರಾಪು ಗೋವಿಂದರಾಜುಲು. ಅವರು ಮದ್ರಾಸಿನ ಪ್ರಮುಖ ದುಬಾಷ್ ಶಿಪ್ಪಿಂಗ್ ಕುಟುಂಬಕ್ಕೆ ಸೇರಿದವರು. ಸ್ವತಃ ಸಂಗೀತಪ್ರೇಮಿಯಾಗಿದ್ದ ಗೋವಿಂದರಾಜುಲು ಬಾಲಾಗೆ ಹಲವು ಜಾವಳಿಗಳನ್ನು ಕಲಿಸಿದರು. ಇನ್ನು ಬಾಲಾಳ ತೌರಿನಲ್ಲಿ ಎಲ್ಲವೂ ಸಂಗೀತ ನೃತ್ಯಮಯವಾಗಿತ್ತು. ಅಕ್ಕ ತಂಗಿಯರು, ಅಣ್ಣತಮ್ಮಂದಿರು, ಅಮ್ಮ, ಚಿಕ್ಕಮ್ಮ, ದೊಡ್ಡಮ್ಮ, ಅಜ್ಜಿ ಎಲ್ಲರಿಗೂ ಸಂಗೀತವೇ ಉಸಿರಾಗಿತ್ತು. ಮನೆಯ ತುಂಬಾ ಹಾಡುಗಾರರು, ವೀಣೆ, ಪಿಟೀಲು, ಮೃದಂಗ, ಘಟ ನುಡಿಸುವವರು ಇದ್ದರು. ಸಾರ್ವಜನಿಕವಾಗಿ ನರ್ತಿಸದಿದ್ದರೂ ಮನೆಯಲ್ಲಿ ಎಲ್ಲರಿಗೂ ನೃತ್ಯ ಬರುತ್ತಿತ್ತು. ಜೊತೆಗೆ ಆರು ತಲೆಮಾರುಗಳಿಂದ ನೃತ್ಯಕ್ಕೆ ಒಂದು ಅರ್ಥಪೂರ್ಣವಾದ ವಿನ್ಯಾಸವನ್ನು ರೂಪಿಸಿದ ತಂಜಾವೂರು ಸಹೋದರರ ಕುಟುಂಬದೊಂದಿಗೆ ಇವರ ಕುಟುಂಬಕ್ಕೆ ಬಿಡಿಸಲಾಗದ ನಂಟು. ಇಂತಹ ವಾತಾವರಣದಲ್ಲಿ ಹುಟ್ಟಿ ಬೆಳೆದ ಬಾಲಾಳಿಗೆ ಸಂಗೀತ ಬೇರೆ ನೃತ್ಯ ಬೇರೆ ಎನ್ನುವ ಕಲ್ಪನೆ ಕನಸು ಮನಸಿನಲ್ಲೂ ಇರಲಿಲ್ಲ. ಸಂಗೀತ ಬಾರದೇ ನರ್ತಿಸುವುದಕ್ಕೆ ಸಾಧ್ಯವೇ? ಎನ್ನುವುದು ಬಾಲಾರ ಪ್ರಶ್ನೆಯಾಗಿತ್ತು. ಮುದ್ರೆಗಳಲ್ಲಿ ಅಭಿವ್ಯಕ್ತಿಗೊಳ್ಳುವ ಸಂಗೀತವೇ ನೃತ್ಯ ಎಂದು ಸ್ವತಃ ಬಾಲಾ ಭಾವಿಸಿದ್ದರು. ಬಾಲಾರ ನೃತ್ಯಕ್ಕೆ ಒಂದು ವಿಶೇಷ ಅಸ್ಮಿತೆಯನ್ನು ನೀಡಿದ್ದೇ ಈ ಅಂಶ.
ಬಾಲಾಳ ಬದುಕಿನಲ್ಲಿ ನೃತ್ಯವೆಂಬುದು ಒಂದು ಆಟವಾಗಿ ಪ್ರಾರಂಭವಾಯಿತು. ಅಜ್ಜಿ ಧನಮ್ಮಾಳ ಮನೆಯೆದುರು ದಿನವೂ ಒಬ್ಬ ಭಿಕ್ಷುಕ ಬರುತ್ತಿದ್ದ. ನೋಡಲು ಹುಚ್ಚನಂತಿದ್ದ ಆತ ಕೋತಿಯಂತೆ ಹಾರಿ ನರ್ತಿಸುತ್ತಿದ್ದ ಮತ್ತು ನಟ್ಟುವನಾರ್ ಹೇಳುವ ’ತತ್ತರಿಗಪ್ಪ ತೈ ತಾ, ತತ್ತರಿಗಪ್ಪ ತೈ ತಾ’ ಎನ್ನುವ ಪಾಟಾಕ್ಷರಗಳನ್ನು ಹೇಳುತ್ತಿದ್ದ. ಅವನು ಬಂದಾಗ ಪುಟ್ಟ ಬಾಲಾ ಕೂಡ ಅವನ ಹಾಗೇ ಕುಣಿಯುತ್ತಿದ್ದಳು. ಅವನನ್ನು ಹೊರಗಟ್ಟುವ ಹೊತ್ತಿಗೆ ಮನೆಯವರೆಲ್ಲರಿಗೂ ಸಾಕುಸಾಕಾಗುತ್ತಿತ್ತು. ನನ್ನ ಮೊದಲ ಗುರುವೇ ಹುಚ್ಚರಾಗಿದ್ದರಿಂದ ನನಗೆ ನೃತ್ಯದ ಹುಚ್ಚು ಹಿಡಿಯದೇ ಮತ್ತೇನಾಗುವುದಕ್ಕೆ ಸಾಧ್ಯ? ಎಂದು ಬಾಲಾ ಹೇಳುತ್ತಿದ್ದರು. ಅವರ ನೃತ್ಯದ ಹಂಬಲ ಮೂರರ ಬಾಲೆಯಾಗಿದ್ದಾಗಲೇ ಪ್ರಕಟವಾಯಿತು. ಬಾಲಾರ ಮನೆಯ ಕೆಳಗಡೆ ಕಾಮಕೋಟಿ ಅಮ್ಮಾಳ್ ಎನ್ನುವವರು ವಾಸವಾಗಿದ್ದರು. ಕೃಷ್ಣಭಕ್ತೆಯಾದ ಅವರು ಮನೆಯ ತುಂಬಾ ಕೃಷ್ಣನ ಚಿತ್ರಗಳನ್ನು ಹಾಕಿಕೊಂಡಿದ್ದರು. ಕೃಷ್ಣನನ್ನು ಎಬ್ಬಿಸಲು ಪ್ರತಿನಿತ್ಯವೂ ಬಾಲಾಳನ್ನು ಕರೆಯುತ್ತಿದ್ದರು. ದಿನವೂ ಪುಟ್ಟ ಬಾಲಾ ನರ್ತಿಸಿ ಕೃಷ್ಣನನ್ನು ಎಬ್ಬಿಸುತ್ತಿದ್ದರು. ಹಾಗಾಗಿಯೇ ಏನೋ ವ್ಯಾಸರಾಯರ ’ಕೃಷ್ಣ ನೀ ಬೇಗನೆ ಬಾರೋ’ ಕೃತಿಯನ್ನು ಬಾಲಾ ಅವಿಸ್ಮರಣೀಯವಾಗಿ ನರ್ತಿಸುತ್ತಿದ್ದರು.
ಮೈಲಾಪುರ ಗೌರಿ ಅಮ್ಮಾಳ್ ಆ ಕಾಲದ ಅತ್ಯದ್ಭುತವಾದ ನರ್ತಕಿ. ಕೇವಲ ತಮ್ಮ ಮುಖಭಾವದ ಮೂಲಕವೇ ಅತ್ಯಂತ ಸಂಕೀರ್ಣ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದ ಅಪರೂಪದ ಕಲಾವಿದೆ. ಅವರ ಕಾರ್ಯಕ್ರಮಗಳಿಗೆ ಬಾಲಾರ ತಾಯಿ ಜಯಮ್ಮ ಮತ್ತು ದೊಡ್ಡಮ್ಮ ಲಕ್ಷ್ಮೀರತ್ನಂ ಪದಂಗಳನ್ನು ಹಾಡುತ್ತಿದ್ದರು. ಹೆಂಗಸರು ನೃತ್ಯಕ್ಕೆ ಹಾಡುವ ಪರಿಪಾಠ ಪ್ರಾರಂಭವಾದದ್ದು ಇಲ್ಲಿಂದಲೇ ಎನ್ನಬಹುದು. ನನಗೆ ನೃತ್ಯಕ್ಕೆ ಮೂಲ ಪ್ರೇರಣೆ ಬಂದಿದ್ದೇ ಮೈಲಾಪುರದ ಗೌರಿ ಅಮ್ಮಾಳ್ ಅವರ ಕಾರ್ಯಕ್ರಮ ನೋಡಿ. ಅವರು ನೃತ್ಯವನ್ನು ಆ ಹಂತಕ್ಕೆ ಬೆಳೆಸಿಲ್ಲದೇ ಹೋಗಿದ್ದರೆ ನನ್ನ ಸಂಗೀತ ಹಾಗೂ ನೃತ್ಯದ ಸಮನ್ವಯದ ಪ್ರಯತ್ನ ಬಹುಶಃ ಸಾಧ್ಯವೇ ಆಗುತ್ತಿರಲಿಲ್ಲ. ಎಂದು ಬಾಲಾ ಯಾವಾಗಲೂ ಹೇಳುತ್ತಿದ್ದರು.
ಇಂತಹ ನೃತ್ಯಪ್ರಾಣ ಬಾಲಾರಿಗೆ ನೃತ್ಯವನ್ನು ಅಷ್ಟೇ ಪ್ರೀತಿಸಿ ಅದಕ್ಕೋಸ್ಕರವೇ ಬದುಕಿದ್ದ ತಂಜಾವೂರು ಕಂದಪ್ಪನವರು ಗುರುವಾಗಿ ದೊರಕಿದ್ದು ಇಬ್ಬರದ್ದೂ ಸೌಭಾಗ್ಯವೆನ್ನಬಹುದು. ಬಾಲಾರ ಅಗಾಧ ಪ್ರತಿಭೆ ಹಾಗೂ ಸೃಜನಶೀಲತೆಗೆ ಈಡಾಗುವಂತಹ ಪ್ರತಿಭೆ ಮತ್ತು ಸೃಜನಶೀಲತೆ ಕಂದಪ್ಪ ಅವರದ್ದು. ಕಂದಪ್ಪನವರು ತುಂಬಾ ಕಠಿಣವಾದ ಆದರೆ ತುಂಬಾ ಅದ್ಭುತವಾದ ಗುರುಗಳು. ಅವರು ಬಾಲಾರಿಗೆ ವಿದ್ಯೆಯನ್ನಷ್ಟೇ ಕಲಿಸಲಿಲ್ಲ್ಲ, ಅದರ ಜೊತೆಗೆ ಖ್ಯಾತಿ ಮತ್ತು ಟೀಕೆ ಇವೆರಡರೊಂದಿಗೆ ಹೇಗೆ ಮುಖಾಮುಖಿ ಆಗಬೇಕೆಂಬುದನ್ನೂ ಕಲಿಸಿದರು.
ಎಳೆಯ ಬಾಲಾ ತುಂಬಾ ಹೊತ್ತು ಅಭ್ಯಾಸ ಮಾಡಬೇಕಾಗಿತ್ತು. ಬೆಳಗ್ಗೆ ತಿಂಡಿಯಾದೊಡನೆ ಪಾಠ ಪ್ರಾರಂಭವಾಗುತ್ತಿತ್ತು. ಮೊದಲು ಬಾಲಾಳಿಗೆ ಅಡವುಗಳನ್ನು ಕಲಿಸಿದರು. ಅದನ್ನು ಗಂಟೆಗಟ್ಟಲೆ ಅಭ್ಯಾಸ ಮಾಡಬೇಕಿತ್ತು. ಕೆಲವೊಮ್ಮೆ ಕುತ್ತಿಗೆಯು ಸರಿಯಾದ ಸ್ಥಾನದಲ್ಲಿ ಇರುವಂತೆ ಮಾಡಲು ಬಾಲಾಳ ತಲೆಯ ಮೇಲೆ ಭಾರವಾದ ಮರಳಿನ ಚೀಲವನ್ನು ಇಡುತ್ತಿದ್ದರು. ಬಾಲಾ ತಪ್ಪುಮಾಡಿದಾಗ ಬೆತ್ತದಿಂದ ಹೊಡೆಯುತ್ತಿದ್ದರು. ಬಾಲಾಳ ಮೀನಖಂಡ ಹಾಗೂ ಕಣಕಾಲಿನ ಮೇಲೆ ಹೊಡೆತದಿಂದಾದ ಗಾಯದ ಕಲೆಗಳು ಕೊನೆಯವರೆಗೂ ಉಳಿದಿದ್ದವು. ಆ ಹೊಡೆತದ ಭಯದಿಂದಾಗಿ ಬಾಲ ತುಂಬಾ ಹುಷಾರಾಗಿ ತಪ್ಪಾಗದಂತೆ ನರ್ತಿಸುತ್ತಿದ್ದರು. ಒಮ್ಮೆ ಬಾಲಾ ಮುದ್ರೆಯೊಂದನ್ನು ಸರಿಯಾಗಿ ಹಿಡಿಯಲಿಲ್ಲ ಎಂದು ಸಿಟ್ಟಾದ ಕಂದಪ್ಪನವರು ನಿಗಿನಿಗಿಸುತ್ತಿದ್ದ ಕೆಂಡವನ್ನು ತಂದು ಬಾಲಾಳ ಕೈಮೇಲೆ ಇಟ್ಟಿದ್ದರು. ಆ ಕಲೆ ಕೊನೆಯವರೆಗೂ ಬಾಲಾಳ ಕೈಮೇಲೆ ಇತ್ತು.
ಈ ಕಠಿಣವಾದ ತರಬೆತಿಯ ನಂತರ ಜಯಮ್ಮಾಳ್ ಅವರಿಂದ ಸಂಗೀತದ ಪಾಠ ಸಾಯಂಕಾಲದವರೆಗೆ ಸಾಗುತ್ತಿತ್ತು. ಅಭಿನಯಕ್ಕೂ ರಾಗದ ಚಲನೆಯಲ್ಲಿನ ಏರಿಳತಗಳಿಗೂ ಇರುವ ನಿಕಟ ಸಂಬಂಧವನ್ನು ಕುರಿತು ಅವರು ಮಗಳಿಗೆ ತಿಳಿಸುತ್ತಿದ್ದರು. ನಿನ್ನ ತಲೆ ಮತ್ತು ನಿನ್ನ ಇಡೀ ಶರೀರ ಕೇವಲ ತಾಳದೊಂದಿಗೆ ಮಾತ್ರವಲ್ಲ, ರಾಗದ ಸಂಗತಿಗಳು ಮತ್ತು ಗಮಕಗಳೊಂದಿಗೆ ಚಲಿಸಬೇಕು, ಎನ್ನುತ್ತಿದ್ದರು. ಬಾಲಾ ನೃತ್ಯದ ಜೊತೆಗೆ ತಮಿಳು, ತೆಲುಗು, ಸಂಸ್ಕೃತ ಇವೆಲ್ಲವನ್ನು ಕಲಿಯಬೇಕಿತ್ತು. ರಾಮಾಯಣ, ಮೊದಲಾದ ಹಲವು ಗ್ರಂಥಗಳು ಅವರಿಗೆ ಬಾಯಿಪಾಠವಾಗಿತ್ತು. ದೇವದಾಸಿ ಕುಟುಂಬದೊಳಗೆ ಸಾಂಪ್ರದಾಯಿಕವಾಗಿ ತರಬೇತಿ ಹೊಂದಿದ್ದ ಹೆಂಗಸರಿಂದ ಅವರು ಹಲವು ವಿಶೇಷ ತರಬೇತಿಗಳನ್ನು ಪಡೆದರು. ಮುಖ್ಯವಾಗಿ ಒಂದು ಕೃತಿ ವ್ಯಕ್ತಪಡಿಸುವ ಭಾವನೆಗಳೆಲ್ಲವನ್ನೂ ಹಸ್ತ ಹಾಗೂ ತೋಳುಗಳನ್ನು ಬಳಸದೆ, ಕೇವಲ ಮುಖವನ್ನಷ್ಟೇ ಬಳಸಿ ಮೊದಲು ಸಂಗೀತದೊಡನೆ, ನಂತರ ಮೌನವಾಗಿ ಅಭಿನಯಿಸಿ, ಅಭಿವ್ಯಕ್ತಿಸುವುದನ್ನು ಕಲಿತರು. ಬಾಲಾ ತಮ್ಮ ಒಡನಾಟಕ್ಕೆ ದಕ್ಕಿದ ಹಲವರಿಂದ ಹಲವನ್ನು ಕಲಿತು ತಮ್ಮ ಕಲೆಯನ್ನು ಬೆಳೆಸಿಕೊಂಡರು. ಚಿನ್ನಯ್ಯ ನಾಯ್ಡು ಅವರಿಂದ ಅಭಿನಯವನ್ನು ಕಲಿತರು. ಮುಂದೆ ಕೂಚುಪುಡಿ ನೃತ್ಯದ ಮಹಾರಾಜ ಎನಿಸಿಕೊಂಡಿದ್ದ ವೇದಾಂತಂ ಲಕ್ಷ್ಮೀನಾರಾಯಣ ಶಾಸ್ತ್ರಿಯವರಿಂದ ಅಭಿನಯಕ್ಕೆ ಸಂಬಂಧಿಸಿದಂತೆ ಹೊಸ ಹೊಳವುಗಳನ್ನು ಪಡೆದರು. ಅಭಿನಯವನ್ನು ಸೃಜನಶೀಲವಾಗಿ ವಿಸ್ತರಿಸುವುದು ಹೇಗೆಂಬುದನ್ನು ತಾವು ಕಲಿತದ್ದು ಶಾಸ್ತ್ರಿಗಳಿಂದಲೇ ಎನ್ನುತ್ತಿದ್ದರು ಬಾಲಾ.
ಹೀಗೆ ಕಲೆಯನ್ನು ಹಲವು ಶತಮಾನಗಳಿಂದ ಉಳಿಸಿ, ಬೆಳೆಸಿ, ಅದಕ್ಕೆ ಹೊಸತನ್ನು ಸೇರ್ಪಡಿಸುತ್ತಾ ಬಂದಿದ್ದ ದೇವದಾಸಿ ಸಮುದಾಯದ ಅಸ್ತಿತ್ವವೇ ೧೯೩೦ ಮತ್ತು ೪೦ರ ದಶಕದಲ್ಲಿ ಗಂಡಾಂತರದಲ್ಲಿತ್ತು. ಯಾವ ಕಲೆಯೊಂದಿಗೆ ಅವರು ಅಷ್ಟು ವರ್ಷಗಳ ಕಾಲ ಅವಿನಾ ಸಂಬಂಧದೊಂದಿಗೆ ಬದುಕಿದ್ದರೋ ಅದು ಅಪವಿತ್ರ, ಅಶುದ್ಧ ಎಂದು ಅದನ್ನು ಶುದ್ಧೀಕರಿಸಹೊರಟಿತ್ತು ಸಮಾಜದ ಒಂದು ವರ್ಗ. ಅದಕ್ಕೆ ವಸಾಹತು ಸರ್ಕಾರ ಒತ್ತಾಸೆ ನೀಡಿತ್ತು. ಆಗ ಪ್ರವಾಹದ ವಿರುದ್ಧ ಈಜಿದವರು ಬಾಲಾ. ನೃತ್ಯದಲ್ಲಿ ಶೃಂಗಾರವೆಂದರೆ ಅದು ಅಶ್ಲೀಲ. ಹಾಗಾಗಿ ನೃತ್ಯದಲ್ಲಿ ಭಕ್ತಿಯೇ ಮುಖ್ಯವಾಗಬೇಕು ಎನ್ನುವುದನ್ನು ಸ್ಥಾಪಿಸುವ ದೊಡ್ಡ ಪ್ರಯತ್ನ ನಡೆಯುತ್ತಿತ್ತು. ಅದರ ಮುಂಚೂಣಿಯಲ್ಲಿ ರುಕ್ಮಿಣೀದೇವೀ ಅರುಂಡೇಲ್ ಇದ್ದರು. ಆ ಸಂದರ್ಭದಲ್ಲಿ ಬಾಲಾ ಅತ್ಯಂತ ದೃಢವಾದ, ಅರ್ಥಪೂರ್ಣ ನಿಲುವನ್ನು ತಳೆದರು. ನೃತ್ಯದಲ್ಲಿ ಶೃಂಗಾರದ ಸ್ಥಾನವನ್ನೂ ಅದರ ಅಭಿವ್ಯಕ್ತಿಯನ್ನೂ ಕುರಿತು ಸ್ಪಷ್ಟವಾಗಿ ಮನದಟ್ಟು ಮಾಡಿದರು. ಹಾಗೆಯೇ ಶ್ರೇಷ್ಠವಾದ ಭರತನಾಟ್ಯವೆನ್ನುವುದು ಹೇಗಿರುತ್ತದೆ ಎನ್ನುವುದನ್ನು ನಿಖರವಾಗಿ ವಿವರಿಸಿದರು, ಶೃಂಗಾರದ ಪರಿಕಲ್ಪನೆ ಭಾರತೀಯ ಮೂರ್ತಿಶಿಲ್ಪ, ವರ್ಣಚಿತ್ರ, ಕಾವ್ಯ, ಸಂಗೀತ-ನೃತ್ಯ, ಹಿಂದು ದರ್ಶನಗಳು ಮತ್ತು ವಿಶ್ವಶಾಸ್ತ್ರದಲ್ಲಿ (ಕಾಸ್ಮೋಲಜಿ) ತುಂಬಾ ವ್ಯಾಪಕವಾಗಿದೆ. ಭಾರತೀಯ ಸೌಂದರ್ಯಶಾಸ್ತ್ರದ ಅತ್ಯಂತ ಪ್ರಾಚೀನ ಕಲ್ಪನೆ ಶೃಂಗಾರ. ಭರತನಾಟ್ಯಕ್ಕೆ ರಚಿತವಾದ ಕಾವ್ಯವೆಲ್ಲವೂ ಸಾಮಾನ್ಯವಾಗಿ ಶೃಂಗಾರರಸ ಪ್ರಧಾನವಾದುದು. ಭಾರತೀಯ ಸೌಂದರ್ಯಶಾಸ್ತ್ರದ ನವರಸಗಳಲ್ಲಿ ಮೊದಲನೆಯದೇ ಶೃಂಗಾರರಸ. ಭರತನಾಟ್ಯದ ಕಲಾತ್ಮಕತೆಯಲ್ಲಿ ಮಾನವ ಪ್ರೇಮ ಮತ್ತು ದೈವಪ್ರೇಮಗಳೆರಡೂ ಭಕ್ತಿ ಮತ್ತು ಶರಣಾಗತಿಯನ್ನು ಅಭಿವ್ಯಕ್ತಿಸುತ್ತವೆ. ಭಕ್ತಿ ಶೃಂಗಾರದ ಸಂಪ್ರದಾಯದಲ್ಲಿ ಆತ್ಮವು ಪರಮಾತ್ಮನ ಮಿಲನಕ್ಕಾಗಿ ಹಾತೊರೆಯುತ್ತದೆ. ಭರತನಾಟ್ಯದಲ್ಲಿ ಸಖಿಯ ಸಹಾಯದಿಂದ ಒಂದಾಗುವ ನಾಯಕ ಮತ್ತು ನಾಯಕಿಯರು ಅದನ್ನು ಸೂಚಿಸುತ್ತಾರೆ. ಇಲ್ಲಿ ಸಖಿಯೆಂದರೆ ಅಜ್ಞಾನವನ್ನು ಕಳೆಯುವ ಗುರು. ಅನಾದಿಯಿಂದ ತಮಿಳು ನೃತ್ಯ ಪರಂಪರೆಯಲ್ಲಿಯೂ ಶೃಂಗಾರರಸಕ್ಕೆ ಪ್ರಧಾನವಾದ ಸ್ಥಾನವಿದೆ. ಈ ಕಲೆಗೆ ತಮ್ಮನ್ನು ತಾವು ಸಂಪೂರ್ಣವಾಗಿ ಅರ್ಪಿಸಿಕೊಂಡಿರುವ ಕಲಾವಿದರಿಗೆ ಸಂಗೀತದಂತೆ ನೃತ್ಯವೂ ಕೂಡ ದೈವ ಸಾಕ್ಷಾತ್ಕಾರದ ಸಾಧನೆಯೇ ಆಗಿರುತ್ತದೆ. ಅಶ್ಲೀಲತೆ ಅನ್ನುವುದು ನೋಡುವವರ ಕಣ್ಣಿನಲ್ಲಿದೆ. ಭರತನಾಟ್ಯದಲ್ಲಿ ತುಂಬಾ ಬಿರುಸಾದ ನುಲಿಯುವಿಕೆ, ಮತ್ತು ಉಗ್ರವಾದ, ರಭಸವಾದ, ರೋಷಾವೇಶದ ಚಲನೆಗಳಿಗೆ ಅವಕಾಶವೇ ಇಲ್ಲ. ಹಾಗಂತ ಅದು ಕೇವಲ ಬದುಕಿನ ಕೋಮಲವಾದ, ಮೃದುವಾದ ಆಯಾಮವನ್ನಷ್ಟೇ ಚಿತ್ರಿಸುವುದಿಲ್ಲ. ಘನವಾದ, ಗಾಢವಾದ ವಿಷಯಗಳನ್ನು ತುಂಬಾ ಸೂಚ್ಯವಾಗಿ ಸಮರ್ಥವಾಗಿ ಹೇಳುತ್ತದೆ. ಸಂಯಮಪೂರಿತ ಘನತೆ ಅಭಿನಯದ ಹೆಗ್ಗುರುತು. ಅತ್ಯುತ್ತಮವಾದ ನಗುವಿನಲ್ಲಿಯೂ ಬಾಯಿ ಚಲನೆ ಸಂಯಮಯುತವಾಗಿರುತ್ತದೆ. ಅತ್ಯಾಶ್ಚರ್ಯವನ್ನು ಅಭಿನಯಿಸುವಾಗಲೂ ಕಣ್ಣನ್ನು ಎಷ್ಟು ಅರಳಿಸಬೇಕೆನ್ನುವುದಕ್ಕೆ ಒಂದು ಸಂಯಮದ ಚೌಕಟ್ಟು ಇರುತ್ತದೆ. ಅತ್ಯಂತ ಗಾಢವಾದ, ತೀವ್ರವಾದ ಪ್ರೇಮ ಸಲ್ಲಾಪದ ಸನ್ನಿವೇಶದಲ್ಲಿಯೂ ನರ್ತಕಿಯು ಸೊಂಟವನ್ನು, ನಡುವನ್ನು ಬಳಸುವುದೇ ಇಲ್ಲ. ಬದಲಾಗಿ ಕೇವಲ ಹಸ್ತ ಮತ್ತು ಮುಖದ ಅಭಿನಯದ ಮೂಲಕವೇ ಆ ಭಾವ ವ್ಯಕ್ತವಾಗುತ್ತದೆ. ಈ ಶಿಷ್ಟತೆ, ಔಚಿತ್ಯ, ಸೂಕ್ಷ್ಮತೆ, ಸಭ್ಯತೆ, ಘನತೆಯೇ ಭರತನಾಟ್ಯಕ್ಕೆ ಈ ಪವಿತ್ರ ದಿವ್ಯತೆಯನ್ನು ತಂದುಕೊಟ್ಟಿರುವುದು. ಪವಿತ್ರವಾದ ಭರತನಾಟ್ಯ ಪವಿತ್ರವಾಗಿಯೇ ಉಳಿದಿರುವುದು ಅದರ ಸೂಚ್ಯವಾದ ಸೂಕ್ಷ್ಮ ಗುಣದಿಂದಾಗಿಯೇ. ಕಲೆಯ ಅಭ್ಯಾಸ ಮತ್ತು ದೈವಶ್ರದ್ಧೆ ಎರಡೂ ಬೇರೆ ಬೇರೆ ಎನ್ನುವ ಕಲ್ಪನೆಯೇ ಬಾಲಾರಲ್ಲಿ ಇರಲಿಲ್ಲ. ನೃತ್ಯವನ್ನು ನನಗೋಸ್ಕರ ಮಾಡುತ್ತೇನೆ. ಅದು ನಾನು ದೇವರಿಗೆ ಸಲ್ಲಿಸುತ್ತಿರುವ ಪ್ರಾರ್ಥನೆ ಎನ್ನುತ್ತಿದ್ದರು. ಭರತನಾಟ್ಯದ ಬೇರುಗಳು ಭಕ್ತಿಯಲ್ಲಿದೆ. ಅಷ್ಟೇ ಏಕೆ ವಾಸ್ತವವಾಗಿ ಎಲ್ಲಾ ಭಾರತೀಯ ಕಲೆಗಳ ಕೇಂದ್ರದಲ್ಲಿ ಇರುವುದೇ ಭಕ್ತಿ. ನಮ್ಮ ಸಂಗೀತ ನೃತ್ಯಗಳೆರಡೂ ದೇವರಿಗೆ ನಾವು ಸಲ್ಲಿಸುವ ಬಹು ಮುಖ್ಯವಾದ ನೈವೇದ್ಯ. ದೈವದ ಅನುಭವ ಪಡೆಯುವ ಹಲವು ದಾರಿಗಳಿವೆ. ಅವುಗಳಲ್ಲಿ ಅತ್ಯಂತ ಸುಲಭ ಹಾಗೂ ವಿಶ್ವಾಸಾರ್ಹವಾದ ದಾರಿಯೆಂದರೆ ನಮ್ಮ ಸಂಗೀತ ಮತ್ತು ನೃತ್ಯ.
ಅಭಿನಯದಲ್ಲಿ ಭರತನಾಟ್ಯಕ್ಕೂ ಉಳಿದ ಕಲಾಪ್ರಕಾರದ ಅಭಿನಯಕ್ಕೂ ಮತ್ತು ದೈನಂದಿನ ಬದುಕಿನಲ್ಲಿ ಬಳಸುವ
ಆಂಗಿಕಕ್ಕೂ ಇರುವ ವ್ಯತ್ಯಾಸವನ್ನೂ ಬಾಲಾ ಸ್ಪಷ್ಟವಾಗಿ ಹೇಳುತ್ತಿದ್ದರು. ಭರತನಾಟ್ಯದಲ್ಲಿ ಬಳಸುವ ಮುದ್ರೆಗಳು ದಿನದಿನದ ಬದುಕಿನಲ್ಲಿ ಅಥವಾ ನಾಟಕದಲ್ಲಿ ಅಥವಾ ಸಿನಿಮಾದಲ್ಲಿ ಬಳಸುವ ಮುದ್ರೆಗಳಿಗಿಂತ ಭಿನ್ನವಾದವು. ಅದು ನೇರವಾದ ರಂಗನಟನೆಯಂತೆ ಇರುವುದಿಲ್ಲ. ಎರಡೂ ಒಂದೇ ಎಂದು ಯಾವ ಕಾರಣಕ್ಕೂ ಭಾವಿಸಬಾರದು. ಗದ್ಯ ಮತ್ತು ಕಾವ್ಯದ ನಡುವೆ ಇರುವ ವ್ಯತ್ಯಾಸವೇ ಭರತನಾಟ್ಯದ ಅಭಿನಯಕ್ಕೆ ಮತ್ತು ಉಳಿದ ಅಭಿನಯಕ್ಕೆ ಇದೆ. ಭರತನಾಟ್ಯದಲ್ಲಿ ಯಾವುದೇ ಭಾವನೆಯನ್ನಾಗಲಿ, ಮನಃಸ್ಥಿತಿಯನ್ನಾಗಲಿ, ಅನುಭವವನ್ನಾಗಲೀ ಅಥವಾ ಸ್ಥಳವನ್ನಾಗಲಿ ಕಲ್ಪನೆಯಿಂದ ಸೃಜನಶೀಲ, ಸಾಂಕೇತಿಕ ಭಾಷೆಯಲ್ಲಿ ಅಭಿವ್ಯಕ್ತಿಸಲಾಗುತ್ತದೆ.
ಆ ಕಾಲದ ಯುವಪೀಳಿಗೆಯ ಹಲವರಿಗೆ ಭರತನಾಟ್ಯದ ಶ್ರೇಷ್ಠತೆ ಅರ್ಥವಾಗಿದ್ದೇ ಬಾಲಾ ಅವರ ನೃತ್ಯದಿಂದ. ಉಜ್ವಲವಾದ ಬೆಳಕಿಲ್ಲದ ಕೇವಲ ಒಂದು ಪುಟ್ಟ ಬಲ್ಬಿನ ಬೆಳಕಿದ್ದ ಸರಳ ವೇದಿಕೆಯ ಮೇಲೆ ಬಾಲ ಮಾಂತ್ರಿಕ ಲೋಕವನ್ನು ಸೃಷ್ಟಿಸುತ್ತಿದ್ದರು. ಕೇವಲ ಕುತೂಹಲದಿಂದ ಹೋದವರು ಅಭಿಮಾನಿಗಳಾಗಿಬಿಡುತ್ತಿದ್ದರು. ಅವರ ಜೊತೆಗೆ ಇರುತ್ತಿದ್ದದು ಅವರ ಪ್ರತಿಭೆ, ಅಮ್ಮನ ಗಾಯನ, ಪಕ್ಕವಾದ್ಯದವರ ಸಂಗೀತ ಹಾಗೂ ಅವರ ಗುರುಗಳ ನಟುವಾಂಗ, ಅಷ್ಟೇ. ಒಬ್ಬ ನರ್ತಕಿಯಲ್ಲಿ ನಿರೀಕ್ಷಿಸಬಹುದಾದ ರೂಪವಾಗಲೀ, ಒಳ್ಳೆಯ ಮೈಮಾಟವಾಗಲಿ, ತಾರುಣ್ಯವಾಗಲಿ, ಒಡವೆ ವಸ್ತ್ರಗಳಾಗಲೀ ಅವರಲ್ಲಿ ಇರಲಿಲ್ಲ. ಉದ್ದಕ್ಕೂ ಅನಾರೋಗ್ಯ. ಹೃದಯದ ಸಮಸ್ಯೆ, ಆರ್ಥರೈಟಿಸ್‌ನ ಸಮಸ್ಯೆ, ಕೊನೆಗೆ ಕ್ಯಾನ್ಸರ್ ಅವರನ್ನು ಕಾಡುತ್ತಿತ್ತು. ಆದರೆ ಇವೆಲ್ಲವನ್ನೂ ಮೀರಿದ ಅವರ ಕಲೆ ಅವರೊಂದಿಗಿತ್ತು. ಎಡಿನ್‌ಬರೋ ಸಂಗೀತೋತ್ಸವದಲ್ಲಿ ಬಾಲಾರನ್ನು ಪರಿಚಯಿಸಲು ದಿಢೀರನೆ ವೇದಿಕೆಗೆ ಆಹ್ವಾನಿಸಿ ಆ ಊರು ಮತ್ತು ವಸತಿ ಹೇಗನ್ನಿಸಿತು ಎಂದು ಕೇಳಿದಾಗ, ಅತ್ಯಂತ ಸಾಧಾರಣವಾದ ಸೀರೆಯನ್ನುಟ್ಟಿದ್ದ, ತಲೆಯನ್ನೂ ಸರಿಯಾಗಿ ಬಾಚಿಕೊಳ್ಳದೇ ಹಾಗೇ ಕುಳಿತಿದ್ದ ಬಾಲಾ, ವೇದಿಕೆ ಹತ್ತಿ ಮಾತಿಲ್ಲದೆ ತನ್ನೆಲ್ಲಾ ಭಾವನೆಯನ್ನೂ ಅಭಿನಯದ ಮೂಲಕವೇ ವ್ಯಕ್ತಪಡಿಸಿಬಿಟ್ಟರು. ಅವರ ಎದೆಯ ದನಿ, ಅಲ್ಲಿ ನೆರೆದಿದ್ದ ಹತ್ತು ಸಾವಿರಕ್ಕೂ ಹೆಚ್ಚು ಪ್ರೇಕ್ಷಕರ ಎದೆಗಳನ್ನೂ ಆತ್ಮೀಯವಾಗಿ ಸ್ಪರ್ಶಿಸಿತು. ರೋಮಾಂಚಿತರಾದ ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
೧೯೩೦ ಮತ್ತು ೪೦ರ ದಶಕ ಬಾಲಾರ ಬದುಕಿನ ಅತಿ ಕಷ್ಟದ ದಿನಗಳು. ದೈಹಿಕ ಆರೋಗ್ಯ ಹದಗೆಟ್ಟಿತ್ತು ಜೊತೆಗೆ ಮಾನಸಿಕವಾಗಿಯೂ ತುಂಬಾ ಕುಗ್ಗಿದ್ದ ಬಾಲಾ ಎಲ್ಲೋ ಕಳೆದೇ ಹೋಗಿದ್ದರು. ನೃತ್ಯ ವಿಮರ್ಶಕರು ಅವರನ್ನು ಮರಿ ಆನೆ ಎಂದು ಲೇವಡಿ ಮಾಡುತ್ತಿದ್ದರು. ಇಂತಹ ಹೊತ್ತಿನಲ್ಲಿ ಅವರಿಗೆ ಒತ್ತಾಸೆಯಾಗಿ ನಿಂತವರು ಖ್ಯಾತ ವಿದ್ವಾಂಸರಾದ ವಿ ರಾಘವನ್, ನಾರಾಯಣ ಮೆನನ್ ಹಾಗೂ ಮದ್ರಾಸ್ ಮ್ಯೂಸಿಕ್ ಅಕಾಡೆಮಿ. ಅಕಾಡೆಮಿಯಲ್ಲಿ ಭರತನಾಟ್ಯ ಕಲಿಸಲು ಶಾಲೆಯೊಂದನ್ನು ತೆರೆದು ಅಲ್ಲಿಗೆ ಬಾಲಾರನ್ನು ನೇಮಿಸಿದರು. ಸಂಗೀತ ನೃತ್ಯಕ್ಕೆ ಸಂಬಂಧಿಸಿದಂತೆ ಸಂಶೋಧನೆ ಮಾಡುತ್ತಿದ್ದ ಡಚ್ ಮಹಿಳೆ ಬೆರಿಲ್ ಡಿ ಜ಼ೂಟೆ ಮತ್ತು ನರ್ತಕ ರಾಂಗೋಪಾಲ್ ಬಾಲಾರ ಬದುಕಿನಲ್ಲೊಂದು ಹೊಸ ಅಧ್ಯಾಯ ಬರೆದರು. ಬಾಲಾರ ನೃತ್ಯದಿಂದ ತುಂಬಾ ಪ್ರಭಾವಿತರಾದ ಬೆರಿಲ್ ಬಾಲಾರ ಉಗ್ರ ಅಭಿಮಾನಿಯಾಗಿಬಿಟ್ಟರು. ಬಹುಶಃ ಇವರಿಬ್ಬರಿಂದಾಗಿ ದೆಹಲಿಯಲ್ಲಿ ಬಾಲಾರ ಕಾರ್ಯಕ್ರಮ ಏರ್ಪಾಡಾಯಿತು. ಬಾಲಾ ಇಡೀ ರಾಜಧಾನಿಯನ್ನೇ ಗೆದ್ದುಕೊಂಡರು. ಕಛೇರಿಗಳು, ಪ್ರಶಸ್ತಿ ಪುರಸ್ಕಾರಗಳು ಬಾಲಾರ ಮುಡಿಗೇರಿದವು. ೧೯೫೫ರಲ್ಲಿ ಸಂಗೀತ ನೃತ್ಯ ಅಕಾಡೆಮಿಯ ಘನ ಪುರಸ್ಕಾರ, ೧೯೫೭ರಲ್ಲಿ ಪದ್ಮಭೂಷಣ, ರವೀಂದ್ರ ಭಾರತಿ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಎಲ್ಲವೂ ಅವರಿಗೆ ಸಂದಿತು. ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಪ್ರತಿಷ್ಠಿತ ಸಂಗೀತ ಕಲಾನಿಧಿ ಪ್ರಶಸ್ತಿ ಪಡೆದಿರುವ ಏಕೈಕ ನೃತ್ಯಕಲಾವಿದೆ ಬಾಲಾ.
ಇಡೀ ಭಾರತವನ್ನು ಕೈವಶ ಮಾಡಿಕೊಂಡ ನಾಟ್ಯರಾಣಿ ಬಾಲಾರ ಭಾಗ್ಯದ ಬಾಗಿಲನ್ನು ತೆರೆದದ್ದು ಈಸ್ಟ್-ವೆಸ್ಟ್ ಸಮ್ಮೇಳನ. ಟೋಕಿಯೋದಲ್ಲಿ ಬಾಲಾರ ಕಾರ್ಯಕ್ರಮ ಆಯೋಜನೆಯಾಗಿತ್ತು. ಸಂಘಟಕ ಶ್ರೀ ನೆಬೊಕೋವ್‌ಗೆ ಬಾಲಾರಿಗೆ ಕಾರ್ಯಕ್ರಮಕೊಡುವ ಮನಸ್ಸಿರಲಿಲ್ಲ. ಆದರೆ ಕಾರ್ಯಕ್ರಮ ನೋಡಿದ ನಂತರ ತಮ್ಮ ತಪ್ಪಿನ ಅರಿವಾಗಿ, ನೇಪಥ್ಯದಲ್ಲಿ ನಿಂತಿದ್ದ ಬಾಲಾರ ಮುಂದೆ ಐರೋಪ್ಯ ಶೈಲಿಯಲ್ಲಿ ಮಂಡಿಯೂರಿ ಕುಳಿತು ಅವರ ಕೈಗಳನ್ನು ಹಿಡಿದು ನಿಮ್ಮನ್ನು ಬರಬೇಡ ಎಂದಿದ್ದರೆ ನಾನು ಅದೆಂತಹ ಅಪರಾಧ ಮಾಡಿಬಿಡುತ್ತಿದ್ದೆ ಎಂದು ಕಣ್ಣೀರಿಟ್ಟರು. ಅಂದು ಬಾಲಾರ ನೃತ್ಯವನ್ನು ನೋಡಿದ ಲಾರ್ಡ್ ಹೇರ್‌ವುಡ್ ತಮ್ಮ ಸೋದರ ಸಂಬಂಧಿ ಇಂಗ್ಲೆಂಡಿನ ರಾಣಿ ಎಲಿಜ಼ಬೆತ್‌ಗೆ ನಾನಂದು ಶ್ರೇಷ್ಠತೆಯ ಸನ್ನಿಧಿಯಲ್ಲಿದ್ದೆ ಎಂದು ಹೇಳಿದರು. ೧೯೬೩ರಲ್ಲಿ ವಿಶ್ವವಿಖ್ಯಾತ ಎಡಿನ್‌ಬರೋ ಸಂಗೀತ ನೃತ್ಯ ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಬಾಲಾರಿಗೆ ಆಹ್ವಾನ ಬಂದಿತು. ಬಾಲಾರ ನೃತ್ಯ ನೋಡಿದ ಪ್ರಖ್ಯಾತ ಬ್ಯಾಲೆ ನರ್ತಕಿ ಮಾರ್ಥಾ ಗ್ರಹಾಂ ಅವರನ್ನು ಅಪ್ಪಿಕೊಂಡು ಲೋಕದ ಕಣ್ಣಿಗೆ ಬೀಳದಂತೆ ಅದ್ಹೇಗೆ ನೀವು ಹೀಗೆ ಅಡಗಿ ಕುಳಿತಿದ್ದೀರಿ? ನಿಮ್ಮನ್ನು ನಾನು ಹಾರಿಸಿಕೊಂಡು ಹೋಗುತ್ತೇನೆ ಎಂದರು. ಬಾಲಾರ ನೃತ್ಯದಿಂದ ಅಷ್ಟರ ಮಟ್ಟಿಗೆ ಅವರು ಪ್ರಭಾವಿತರಾಗಿದ್ದರು.
ಅವರ ಕಲೆ ಭಾಷೆ, ಸಂಸ್ಕೃತಿ, ದೇಶ ಎಲ್ಲಾ ಎಲ್ಲೆಗಳನ್ನೂ ಮೀರಿಕೊಂಡು ಜನರನ್ನು ಮುಟ್ಟಿಬಿಡುತ್ತಿತ್ತು. ಬಾಲಾರ ನೃತ್ಯ ಜನಾಂಗೀಯ ಅಡ್ಡಗೋಡೆಗಳನ್ನೆಲ್ಲಾ ಅರ್ಥಹೀನ ಎನಿಸುವಂತೆ ಮಾಡಿತ್ತು. ಬಾಲಸರಸ್ವತಿಯವರ ಹಸ್ತಗಳು ಪಾರಿವಾಳಗಳಂತೆ ಹಾರುತ್ತಾ ವಿದೇಶಿಯರಿಗೆ ಅರ್ಥವಾಗದ ಯಾವುದೋ ಕಥೆಯನ್ನು ವಿವರಿಸುವಾಗ, ಅದು ಅರ್ಥವಾಗದೇ ಹೋದಾಗಲೂ ಅದನ್ನು ಮೆಚ್ಚುವುದಕ್ಕೆ ಸಾಧ್ಯವಾಗುತ್ತದೆ. ಅವರ ಪ್ರತಿಯೊಂದು ಚಲನೆಯೂ ಅತ್ಯಂತ ಮನೋಹರವಾಗಿ, ಮನೋಜ್ಞವಾಗಿ ಸಂಗೀತಕ್ಕೆ ಹೊಂದಿಕೊಳ್ಳುತ್ತದೆ ಮತ್ತು ಒಬ್ಬ ರಸಿಕ ಉಳಿದಂತೆ ಸಂಗೀತದ ಬಗ್ಗೆ ಕೊಡುವುದಕ್ಕಿಂತ ಹೆಚ್ಚಿನ ಗಮನವನ್ನು ನೀಡುವಂತೆ ಅವರ ನೃತ್ಯ ಮಾಡುತ್ತದೆ. ನಿರಂತರವಾಗಿ ಆಡುವ ಉಸಿರಿನಂತೆ ಆದರೆ ಮೇಲ್ನೋಟಕ್ಕೆ ಅದರ ಇರುವಿಕೆಯೇ ಭಾಸವಾಗದಂತೆ ಲಯವೆನ್ನುವುದು ಬಾಲಾರ ನೃತ್ಯದಲ್ಲಿ ಹಾಸುಹೊಕ್ಕಾಗಿತ್ತು. ಅವರ ನೃತ್ತಭಾಗಗಳು ಅತ್ಯಂತ ಸುಲಲಿತವೂ ಪರಿಪೂರ್ಣವೂ ಆಗಿರುತ್ತಿದ್ದವು. ಆಹಾ! ಅದೆಷ್ಟು ಸಲೀಸಾಗಿ, ಲೀಲಾಜಾಲವಾಗಿ ಬರುತ್ತಿದೆ ಎನಿಸುತ್ತಿತ್ತು, ಎನ್ನುವುದು ಹಲವು ವಿದೇಶೀಯರ ಅಭಿಪ್ರಾಯವಾಗಿತ್ತು. ಬಾಲಸರಸ್ವತಿಯವರ ಆಂಗಿಕದ ಅಭಿವ್ಯಂಜಕತೆ, ಭಾವನೆಗಳ ತೀವ್ರತೆ ಮತ್ತು ಅವರ ಇಡೀ ವ್ಯಕ್ತಿತ್ವದಲ್ಲಿನ ಏಕಾಗ್ರತೆ ಇವೆಲ್ಲವೂ ಅವರ ನೃತ್ಯವನ್ನು ಮನರಂಜನೆಯ ಸ್ತರದಿಂದ ಪರಮಾನಂದ ತುಂಬಿದ ಭಾವೋತ್ಕರ್ಷದ ಸ್ತರಕ್ಕೆ ಒಯ್ಯುತ್ತಿತ್ತು. ಭಾರತೀಯ ನೃತ್ಯದ ದೈವಿಕ ಮೂಲವನ್ನು ಮಿಂಚಿನೋಪಾದಿಯಲ್ಲಿ ಬಾಲಾ ಹೊಳೆಯಿಸಿಬಿಡುತ್ತಾರೆ ಎಂದು ಹಲವು ವಿದೇಶಿ ವಿಮರ್ಶಕರು ಮೆಚ್ಚಿಕೊಂಡಿದ್ದಾರೆ. ಭರತನಾಟ್ಯದ ರುಚಿಯನ್ನು ಸವಿಯಲು ಭರತನಾಟ್ಯದ ವಿದ್ಯಾರ್ಥಿಯೇ ಆಗಬೇಕೆಂದೇನಿಲ್ಲ. ಪ್ರತಿಯೊಂದು ಮುದ್ರೆ ಮತ್ತು ಹಸ್ತವನ್ನೂ ಅರ್ಥೈಸಬೇಕಾಗಿಯೂ ಇಲ್ಲ. ತಮ್ಮ ಸೂಕ್ಷ್ಮವಾದ ಬೆರಳುಗಳು ಮತ್ತು ದುಂಡಾದ ತೋಳುಗಳ ಮೂಲಕ ಅವರು ಮಾಡುತ್ತಿದ್ದ ಪಾದರಸದಷ್ಟು ಚುರುಕಾದ ಆದರೆ ಕಡೆದಿಟ್ಟ ವಿಗ್ರಹದಷ್ಟು ನಿಖರವಾದ ಚಲನೆಯನ್ನು ನೋಡುವುದು ಕಣ್ಣಿಗೆ ಹಬ್ಬ. ಅವರ ನಗುಮುಖ, ಕೊಂಕುವ, ಮೇಲೇರುವ ಹುಬ್ಬು, ಸಿಡುಕಿನ ನೋಟ, ಆಹ್ವಾನಿಸುವ ನೋಟ ಹೀಗೆ ಕ್ಷಣಕ್ಷಣಕ್ಕೂ ಬದಲಾಗುವ ಅವರ ಮುಖಭಾವವನ್ನು ನೋಡುವುದೇ ಒಂದು ಸೊಗಸಿನ ಅನುಭವ. ಅವರ ಹೆಸರನ್ನು ಸರಿಯಾಗಿ ಹೇಳುವುದಕ್ಕೆ ಬಾರದಿರುವವರಿಗೂ ಸರಳ ಬಾಲಾರ ಅಪರೂಪದ ಕಲೆಯನ್ನು ಆಸ್ವಾದಿಸಲು ಸಾಧ್ಯ. ಬಾಲಾರ ನೃತ್ಯ ನೋಡದವರಿಗೆ ಸತ್ಯಜಿತ್ ರಾಯ್ ಅವರನ್ನು ಕುರಿತು ತೆಗೆದಿರುವ ಸಾಕ್ಷ್ಯಚಿತ್ರ ಬಾಲಾ, ಹಾಗೂ ಯುಟ್ಯೂಬಿನಲ್ಲಿ ಸಿಗುವ ಒಂದೆರಡು ತುಣಕುಗಳು ಅವರ ನೃತ್ಯವನ್ನು ಒಂದಿಷ್ಟು ಪರಿಚಯಿಸುತ್ತದೆ. ಇಂಗ್ಲಿಷಿಗೊಬ್ಬನೇ ಷೇಕ್ಸ್‌ಪಿಯರ್ ಇರುವಂತೆ ಭರತನಾಟ್ಯಕ್ಕೆ ಒಬ್ಬಳೇ ರಾಣಿ ಬಾಲ ಸರಸ್ವತಿ.ಲ

ಶೈಲಜ, ಟಿ ಎಸ್ ವೇಣುಗೋಪಾಲ್
ಫೋಟೊ : ಅವಿನಾಶ್ ಪಾಸ್ರಿಚ

Recommended Posts

Leave a Comment

Contact Us

We're not around right now. But you can send us an email and we'll get back to you, ASAP

Not readable? Change text.